ದೇಶದ ಅಭಿವೃದ್ಧಿಗೆ ಜನಗಣತಿ ಪೂರಕ
ಮೈಸೂರು: ದೇಶದ ಅಭಿವೃದ್ಧಿಗೆ ರೂಪಿಸುವ ಯೋಜನೆಗಳ ಉದ್ದೇಶದಿಂದ ಜನಗಣತಿ ಪ್ರಾಮುಖ್ಯತೆ ಪಡೆದಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹೇಳಿದರು.
ಮೈಸೂರು ವಿವಿ ಸಂಖ್ಯಾಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ ಆಯೋಜಿಸಿದ್ದ 2011ನೇ ಭಾರತೀಯ ಜನಗಣತಿ ಕುರಿತ ಒಂದು ದಿನದ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಜನಸಂಖ್ಯೆಯ ದೃಷ್ಟಿಯಿಂದ ಭಾರತವು ವಿಶ್ವದ ಅತಿ ದೊಡ್ಡ ಎರಡನೆಯ ದೇಶ. ಹೀಗಾಗಿ ಜನಗಣತಿ ಎಂಬುದು ಕೇವಲ ತಲೆಗಳ ಎಣಿಕೆ ಅಲ್ಲ. ಬದಲಿಗೆ ಭವಿಷ್ಯದ ಅಭಿವೃದ್ಧಿಯ ದೃಷ್ಟಿಯಿಂದ ಯೋಜನೆ ರೂಪಿಸಲು ಜನಗಣತಿ ನೆರವಾಗುತ್ತದೆ. ದೇಶದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿ ತಿಳಿಸುತ್ತದೆ. ಹೀಗಾಗಿ ಜನಗಣತಿ ಎಂಬುದು ಇಂದು ದೊಡ್ಡ ಸಂಗತಿಯಾಗಿದೆ. 2011ರ ಜನಗಣತಿ ಆಧಾರದ ಮೇಲೆ ವಿಸ್ತೃತ ಚರ್ಚೆ ನಡೆಯಬೇಕಿದೆ ಎಂದು ತಿಳಿಸಿದರು.
ಬಳಿಕ ನಡೆದ ಗೋಷ್ಠಿಯಲ್ಲಿ ಮನೆಗಳ ಗಣತಿ, ಮನೆ ಮಾಲೀಕರ ಕುರಿತು ಚರ್ಚೆಗಳು ನಡೆಯಿತು. ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯದ ಉಪ ನಿರ್ದೇಶಕಿ ಡಿ.ಹೆಲಿನ ಪ್ರೇಮಕುಮಾರಿ, ಮೈಸೂರು ವಿವಿ ಸಂಖ್ಯಾಶಾಸ್ತ್ರ ವಿಭಾಗದ ಪ್ರೊ.ಎಸ್. ರವಿ, ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಪ್ರೊ.ಬಿ.ಕೆ. ತುಳಸಿಮಾಲ, ಡಾ.ಬಿ.ಎಸ್. ಬಿರಾದರ್, ಪ್ರೊ.ಡಿ.ಎಸ್. ಲೀಲಾವತಿ, ಡಾ.ಎಚ್.ಎಂ. ಮರುಳಸಿದ್ದಯ್ಯ ಇದ್ದರು.