ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನೇತಾಜಿ ಕಳೆದುಕೊಂಡ ನಾವು ನತದೃಷ್ಟರು: ಪ್ರೊ.ಕೃಷ್ಣನ್

Rashmi Kasaragodu
Updated On : 24 Jan 2014, 2:13 am

ಮೈಸೂರು: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಈ ದೇಶ, ಈ ಪಕ್ಷಗಳು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಿವೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಹೇಳಿದರು.
ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ಮತ್ತು ನೇತಾಜಿ ಜನ್ಮಶತಮಾನೋತ್ಸವ ಸಮಿತಿ ಸಂಯುಕ್ತವಾಗಿ ಮಹಾಜನ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ನೇತಾಜಿ ಜನ್ಮದಿನಾಚರಣೆ ಹಾಗೂ ರಾಷ್ಟ್ರಭಕ್ತಿ ಆಧಾರಿತ ಚಲನಚಿತ್ರೋತ್ಸವದಲ್ಲಿ ಅವರು ಮಾತನಾಡಿದರು.
ಈ ದೇಶದಲ್ಲಿನ ವ್ಯವಸ್ಥೆಯು ಸುಭಾಷ್ಚಂದ್ರ ಬೋಸ್ ಅವರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಿತು. ಅವರ ನಾಯಕತ್ವ ನಮಗೆ ದೊರೆತಿದ್ದರೆ ಭಾರತ ಅಭಿವೃದ್ಧಿ ಹೊಂದಿದ ಸುಂದರ ದೇಶವಾಗುತ್ತಿತ್ತು. ಅವರಿಗಿದ್ದ ಎಲ್ಲ ರೀತಿಯ ಆಲೋಚನೆಗಳಿಗೆ ಜನ ಮನ್ನಣೆ ನೀಡಿದ್ದರು. ಆದರೆ ಅವರ ಸುತ್ತ ಇದ್ದವರು ವಿರೋಧಿಸಿ ಮೂಲೆಗುಂಪು ಮಾಡಿದ್ದಾಗಿ ಅವರು ಬೇಸರ ವ್ಯಕ್ತಪಡಿಸಿದರು.
ಅವರನ್ನು ಕಳೆದುಕೊಂಡ ನಾವು ನತದೃಷ್ಟರು. ಅವರಲ್ಲಿದ್ದ ಶಿಸ್ತು, ಪ್ರಾಮಾಣಿಕತೆ, ದೇಶದ ಬಗೆಗಿನ ಗೌರವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಾಧ್ಯಾಪಕರು ತಿಳಿಸಿಕೊಡಿ: ಎನ್ಸಿಸಿಯ ಕಮಾಂಡಿಂಗ್ ಅಧಿಕಾರಿ ಕರ್ನಲ್ ಸುಭಾಷ್ ಎಸ್. ಸೆಹೆಗಾಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುಭಾಷ್ಚಂದ್ರ ಬೋಸ್ ಅವರಲ್ಲಿನ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ನೀವು ವೈದ್ಯರೋ, ಪ್ರಾಧ್ಯಾಪಕರೋ ಆಗಬಹುದು. ಆದರೆ ಮೊದಲು ಉತ್ತಮ ನಾಗರಿಕರಾಗಬೇಕು. ಹೀಗಾಗಿ ಸುಭಾಷ್ಚಂದ್ರ ಬೋಸ್ ಅವರಂತ ನಾಯಕರ ಆದರ್ಶಗಳು ನಿಮಗೆ ಮಾರ್ಗದರ್ಶಕ ಆಗಬೇಕು. ಪ್ರಾಧ್ಯಾಪಕರು ಸಹ ಈ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದು ಸಲಹೆ ನೀಡಿದರು.
ಸಾಮಾಜಿಕ ಕಳಕಳಿಯೊಂದಿಗೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ನಾವು ಸರಿ ಇದ್ದರೆ ಎಲ್ಲವೂ ಸರಿ ಇರುತ್ತದೆ. ಆದ್ದರಿಂದ ಮೊದಲು ನಾವು ಸರಿ ಆಗಬೇಕು ಎಂದು ಹೇಳಿದರು.
ಮಹಾಜನ ವಿದ್ಯಾಸಂಸ್ಥೆ ಅಧ್ಯಕ್ಷ ಆರ್.ವಾಸುದೇವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ನೇತಾಜಿ ಜನ್ಮ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎಸ್. ಶಿವರಾಜಪ್ಪ, ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ವಿ. ಪ್ರಭಾಕರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement