ನೌಕರರು ಕಾನೂನು ತಿಳಿಯಬೇಕು
ಪಿರಿಯಾಪಟ್ಟಣ: ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಕಾನೂನನ್ನು ಸಮರ್ಪಕವಾಗಿ ತಿಳಿದುಕೊಂಡು ಕೆಲಸ ನಿರ್ವಹಿಸಬೇಕು ಎಂದು ನ್ಯಾಯಾಧೀಶ ಡಿ.ನಾಗರಾಜೇಗೌಡ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಭವನದ ಸಭಾಂಗಣದಲ್ಲಿ ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲೂಕು ವಕೀಲರ ಸಂಘದ ವತಿಯಿಂದ ಕಂದಾಯ ಇಲಾಖೆ, ಭೂ ಮಾಪನಾ ಇಲಾಖೆ ಸಿಬ್ಬಂದಿಗೆ ಹಾಗೂ ತಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಹಾಗೂ ಕಾರ್ಯದರ್ಶಿಗಳಿಗೆ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳು ಸಮಸ್ಯೆಗಳನ್ನು ಕಾನೂನು ವ್ಯಾಪ್ತಿಯಲ್ಲಿಯೇ ಬಗೆಹರಿಸಬೇಕು. ಕಾನೂನು ವ್ಯಾಪ್ತಿಯನ್ನು ಎಂದೂ ಮೀರಬಾರದು. ನ್ಯಾಯಾಲಯದ ಆದೇಶಗಳನ್ನು ಕ್ರಮಬದ್ಧವಾಗಿ ಚಾಚೂ ತಪ್ಪದೆ ಅನುಸರಿಸಬೇಕು. ನ್ಯಾಯಾಲಯದ ಆದೇಶಗಳನ್ನು ಉಲಂಘಿಸಿದ್ದಲ್ಲಿ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
ತಹಸೀಲ್ದಾರ್ ಎಂ.ಕೆ. ಸವಿತಾ ಮಾತನಾಡಿದರು. ಹಿರಿಯ ವಕೀಲರಾದ ಗೋವಿಂದೇಗೌಡ, ಸಿ.ಕೆ. ಮಂಜುನಾಥ್, ಸಹಾಯಕ ಅಭಿಯೋಜಕ ಯೋಗೇಶ್, ವಿವಿಧ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ, ಅಧಿಕಾರಿಗಳ ಸಮಸ್ಯೆಗಳಿಗೆ ಹಾಗೂ ಅವರ ಪ್ರಶ್ನೆ ಮತ್ತು ಸಂಶಯಗಳಿಗೆ ಉತ್ತರ ನೀಡಿದರು.
ತಾಪಂ ಇಒ ಮಹದೇವಣಸ್ವಾಮಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಬಿ.ಎಂ. ಕುಮಾರ್, ಪ್ರ. ಕಾರ್ಯದರ್ಶಿ ಎಂ.ಸಿ. ಹರೀಶ್, ಉಪ ತಹಸೀಲ್ಧಾರ್ ಸಣ್ಣರಾಮಪ್ಪ, ರವಿಶಂಕರ್, ಕುಬೇರ ಇದ್ದರು.