ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಠ್ಯದೊಂದಿಗೆ ಚಟುವಟಿಕೆಯಿರಲಿ

Rashmi Kasaragodu
Updated On : 24 Jan 2014, 2:14 am

ಕ.ಪ್ರ.ವಾರ್ತೆ    ಮೈಸೂರು    ಜ. 23
ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳು ಅವಶ್ಯಕ ಎಂದು ದಕ್ಷಿಣ ವಲಯ ಐಜಿಪಿ ಡಾ.ಕೆ. ರಾಮಚಂದ್ರ ರಾವ್ ಹೇಳಿದರು.
ನಗರದ ಜಗನ್ಮೋಹನ ಅರಮನೆಯಲ್ಲಿ ಶಾರದಾ ಪಬ್ಲಿಕ್ ಶಾಲೆಯ ಐದನೇ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ವಿಸ್ಮಯ ಲೋಕ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ವಿದ್ಯಾರ್ಥಿಗಳ ಬೆಳವಣಿಗೆಗೆ ತರಗತಿ ಪಾಠಗಳು ಎಷ್ಟು ಮುಖ್ಯವೋ, ಅದೇ ರೀತಿ ತರಗತಿ ಹೊರಗಿನ ಪಠ್ಯೇತರ ಚಟುವಟಿಕೆಗಳು ಸಹ ಮುಖ್ಯ. ಶೈಕ್ಷಣಿಕ ಬೋಧನೆಯಿಂದ ಜ್ಞಾನ ತುಂಬುವುದರ ಜತೆಗೆ ವ್ಯಕ್ತಿತ್ವ ವಿಕಸನಗೊಳಿಸುವ ಕಲಿಕೆ ಹಾಗೂ ಮಾಹಿತಿಯನ್ನು ನೀಡುವುದು ಅಗತ್ಯವಿದೆ. ಈ ದಿಸೆಯಲ್ಲಿ ಸಮಗ್ರ ಅಭಿವೃದ್ಧಿಗೆ ಪೂರಕವಾದ ಎಲ್ಲ ಚಟುವಟಿಕೆಗಳಿಗೂ ಮಕ್ಕಳು ಆಸಕ್ತಿ ವಹಿಸಬೇಕು ಎಂದರು.
ಮನುಷ್ಯ ಪರಿಪೂರ್ಣನಾಗಲು ಶಿಕ್ಷಣವೇ ಸಾಧನವೆಂದು ಸ್ವಾಮಿ ವಿವೇಕಾನಂದರು ಹೇಳಿರುವಂತೆ, ಎಲ್ಲರೂ ಶಿಕ್ಷಣ ಪಡೆಯಬೇಕು ಹಾಗೂ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ರೂಢಿಸಿದಾಗ ಕುಟುಂಬ, ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಸಹಾಯಕವಾಗಲಿದೆ. ಈ ದಿಸೆಯಲ್ಲಿ ಇಂತಹ ಕಾರ್ಯಕ್ರಮಗಳು ಸೂಕ್ತ ವೇದಿಕೆಯಾಗಿದೆ ಎಂದು ತಿಳಿಸಿದರು.  ಮೈಸೂರು ತಾಲೂಕು ಬಿಇಒ ರಾಮಾರಾಧ್ಯ, ಉತ್ತಮ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಾತಾವರಣ ಹೊಂದುವುದು ವಿಶೇಷ ಶಾಲೆಯ ಲಕ್ಷಣ. ಮಕ್ಕಳನ್ನು ಕೇವಲ ಯಾಂತ್ರಿಕ ಹಾಗೂ ತಾಂತ್ರಿಕವಾಗಿ ತಯಾರು ಮಾಡದೆ, ಅವರಲ್ಲಿ ಬೌದ್ಧಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ವೃದ್ಧಿಗೊಳಿಸುವುದು ಅವಶ್ಯಕ ಎಂದರು. ಸಂಸ್ಥೆ ಅಧ್ಯಕ್ಷ ರಾಮನಾಥನ್ ಅಧ್ಯಕ್ಷತೆ ವಹಿಸಿದ್ದರು. ಎಂಡಿ ಮೋಹನ್ ರೆಡ್ಡಿ ಇದ್ದರು. ಪ್ರಾಂಶುಪಾಲೆ ಜಯಶ್ರೀ ಮುರಳೀಧರ್ ವರದಿ ಮಂಡಿಸಿದರು. ಶಿಕ್ಷಕಿ ರಮ್ಯ ಸ್ವಾಗತಿಸಿದರು. ನಂತರ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement