ವಿವೇಕಾನಂದ ಮೂವ್ಮೆಂಟ್ ಸಾಧನೆ ಶ್ಲಾಘನೀಯ: ಶ್ರೀ ಬಣ್ಣನೆ
ಎಚ್.ಡಿ. ಕೋಟೆ: ಆದಿವಾಸಿ ಗಿರಿಜನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಮತ್ತು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಿಕೊಂಡು ಬಂದಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಸಾಧನೆ ಅಭಿನಂದನೀಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಹೊಸಹಳ್ಳಿ ಗ್ರಾಮದ ವಿವೇಕಾನಂದ ಶಿಕ್ಷಕ ತರಬೇತಿ ಮತ್ತು ಸಂಶೋಧನ ಕೇಂದ್ರ ಹಾಗೂ ವಿವೇಕ ಗಿರಿಜನ ಶೈಕ್ಷಣಿಕ ಕೇಂದ್ರದ ಆವರಣದಲ್ಲಿ ಸ್ವಾಮಿ ವಿವೇಕಾನಂದರ 151ನೇ ಜಯಂತಿ ಆಚರಣೆ ಮತ್ತು ವಿವೇಕಾನಂದರ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಇಂದು ಇಲ್ಲದೆ ಹೋದರೂ, ಅವರ ಪ್ರತಿಯೊಂದು ಮಾತು ರಾಷ್ಟ್ರಬಂಧುಗಳ ಮನಸ್ಸಿನಲ್ಲಿ ಕೆಲಸ ಮಾಡುತ್ತಿದೆ. ಅವರು ಬದುಕಿದ್ದು ಕೇವಲ 39 ವರ್ಷ ಮಾತ್ರ. ಆದರೆ ಮಾಡಿದ ಸಾಧನೆ ಅನನ್ಯ. ಆದರೂ ಅವರು ಬದುಕಿದ್ದ ಅವಧಿಗಿಂತ, ಅವರು ಮೃತಪಟ್ಟ ನಂತರ ಅವರಿಂದ ಸ್ಪೂರ್ತಿಗೊಂಡ ಸಾವಿರಾರು ಜನರು ಸ್ವಯಂ ಪ್ರೇರಿತರಾಗಿ ಸಮಾಜ ಸೇವಾ ಕಾರ್ಯಗಳು ಮತ್ತು ಶಿಕ್ಷಣ ನೀಡುವ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದರು.
ವಿವೇಕಾನಂದರ ಆದರ್ಶಗಳು, ಚಿಂತನೆಗಳು, ತತ್ವಗಳು ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿವೆ. ಹಾಗಾಗಿ ವಿಶ್ವದಲ್ಲಿ ಎಷ್ಟೋ ಜನ ಸನ್ಯಾಸಿಗಳಾದರು. ಕೆಲವರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟರೂ, ಸಮಾಜ ಸೇವೆಗೆ ನಿಂತರು ಎಂದರು.
ಕೌಶಲ್ಯ ಕುಟೀರವನ್ನು ಸಿಎಸ್ಆರ್ಎಕ್ಸ್ ಇಂಡಿಯಾ ಸ್ಟೀಲ್ ಸಂಸ್ಥೆ ಉಪಾಧ್ಯಕ್ಷ ಪ್ರೊ.ಅನುರಾಗ್ ತ್ಯಾಗಿ ಉದ್ಘಾಟಿಸಿದರು. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಚುಂಚನಕಟ್ಟೆ ಮಠದ ಶಿವಾನಂದ ಸ್ವಾಮೀಜಿ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಅಧ್ಯಕ್ಷ ಡಾ.ಎಂ.ಆರ್. ಸೀತಾರಾಂ ಇದ್ದರು.