ದಲಿತ ಕುಟುಂಬಕ್ಕೆ ಬಹಿಷ್ಕಾರ ಡಿಸಿ ಕಚೇರಿ ಎದುರು ಧರಣಿ
ಮೈಸೂರು: ಸ್ವಜಾತಿ ಸಮುದಾಯದಿಂದಲೆ ಬಹಿಷ್ಕಾರಕ್ಕೆ ಒಳಗಾದ ತಾಲೂಕಿನ ಮಾವಿನಹಳ್ಳಿಯ ದಲಿತ ಕುಟುಂಬವೊಂದು ನ್ಯಾಯಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟಿಸಿತು. ಮಾವಿನಹಳ್ಳಿಯ ವೆಂಕಟರಾಮು ಮತ್ತು ಲೀಲಾ ತಮ್ಮ ಕುಟುಂಬ ಸದಸ್ಯರೊಂದಿಗೆ, ಪಾತ್ರೆ, ಬಟ್ಟೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಬಂದು ಪ್ರತಿಭಟಿಸಿದರು. ತಮ್ಮ ಜಮೀನು ಅನ್ಯರ ಪಾಲಾಗುವುದನ್ನು ತಪ್ಪಿಸಲು ಹೋಗಿದ್ದರಿಂದ ಕುಟುಂಬ ಬಹಿಷ್ಕಾರ ಹಾಕಲಾಗಿದೆ. ಇದಕ್ಕೆ ಮೇಲ್ವರ್ಗದವರ ಕುಮ್ಮಕ್ಕು ಇದೆ. ಬಹಿಷ್ಕಾರ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಮತ್ತು ಎಸ್ಪಿಗೆ ಮನವಿ ಸಲ್ಲಿಸಿದ್ದರೂ ಯಾವುದೆ ಪ್ರಯೋಜನ ಆಗಿಲ್ಲ ಎಂದು ಅವರು ಆರೋಪಿಸಿದರು. ನಮಗೆ ಬಹಿಷ್ಕಾರ ಹಾಕಿ ಒಂದು ವರ್ಷವಾಗಿದೆ. ತಮ್ಮ ಮಕ್ಕಳನ್ನು ಅಂಗನವಾಡಿಗೂ ಸೇರಿಸಿಕೊಳ್ಳುತ್ತಿಲ್ಲ. ಒಂದು ವೇಳೆ ಸೇರಿಸಿಕೊಂಡರೂ, ಯಾರೂ ಮಾತನಾಡುತ್ತಿಲ್ಲ. ಈ ಕಾರಣಕ್ಕೆ ಮತ್ತೊಬ್ಬ ಮಗನನ್ನು ಹೆಂಡತಿಯ ಊರಿನ ಶಾಲೆಗೆ ಸೇರಿಸಿದ್ದೇವೆ. ಬಹಿಷ್ಕಾರದ ಮೂಲಕ ಮಾನಸಿಕ ಆಘಾತಕ್ಕೆ ಒಳಗಾಗಿದ್ದೇವೆ ಎಂದರು. ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಬಹಿಷ್ಕಾರ ಹಾಕಿದ ವ್ಯಕ್ತಿಗಳು ಮತ್ತು ಹಲ್ಲೆಗೆ ಯತ್ನಿಸಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ವೆಂಕಟರಾಮು ಕುಟುಂಬದವರು ಪ್ರತಿಭಟನೆ ಹಿಂದಕ್ಕೆ ಪಡೆದರು.