ಬಾಲಕಾರ್ಮಿಕರ ಗುರುತಿಸಲು ಸಾಕ್ಷ್ಯ ಬಹುಮುಖ್ಯ
ಮೈಸೂರು: ಬಾಲಕಾರ್ಮಿಕರನ್ನು ಗುರುತಿಸಲು ಸಾಕ್ಷ್ಯ ಬಹುಮುಖ್ಯ ಎಂದು ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತ ವೆಂಕಟೇಶ್ ಎ.ಸಿಂಧಿಹಟ್ಟಿ ಹೇಳಿದರು.
ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸೊಸೈಟಿ ಹಾಗೂ ಜ್ಞಾನಜ್ಯೋತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ರೋಟರಿ ಸಭಾಂಗಣದಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತ ಸೆಕ್ಸನ್ ಅಧಿಕಾರಿಗಳಿಗೆ ಶುಕ್ರವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹೊಟೇಲ್, ಅಂಗಡಿ, ಕೈಗಾರಿಕೆ ಮತ್ತಿತರ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ನಿಜವಾದ ಬಾಲಕಾರ್ಮಿಕರನ್ನು ಗುರುತಿಸಲು ಮಾಲೀಕರನ್ನು ತನಿಖೆ ನಡೆಸಬೇಕು. ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಆಗ ಮಾತ್ರ ಇದನ್ನು ತಡೆಗಟ್ಟಬಹುದು ಹಾಗೂ ಅಪರಾಧಿಗಳಿಗೆ ಶಿಕ್ಷೆ ನೀಡಲು ಸಾಧ್ಯವಾಗಲಿದೆ ಎಂದರು.
ಈ ಹಿಂದೆ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಇದರ ನಿರ್ಮೂಲನೆಗೆ ಹೆಚ್ಚಿನ ಅಧಿಕಾರ ನೀಡಲಾಗಿತ್ತು. ಆದರೆ ಇತ್ತೀಚೆಗೆ ನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ 11 ಇಲಾಖೆಗಳಲ್ಲಿ ಸೆಕ್ಸನ್ ಅಧಿಕಾರಿಗಳನ್ನು ಗುರುತಿಸಿ ಅವರನ್ನು ನಿರೀಕ್ಷಕರಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಬಾಲಕಾರ್ಮಿಕರು ಕೆಲಸ ಮಾಡುವ ಉದ್ಯಮಿಗಳ ಮೇಲೆ ದಾಳಿ ನಡೆಸುವ ವಿಧಾನ, ಸಾಕ್ಷ್ಯಗಳ ಸಂಗ್ರಹ ಮತ್ತಿತರ ವಿಚಾರಗಳ ಕುರಿತು ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು. ಅಲ್ಲದೆ ಬಾಲಕಾರ್ಮಿಕರೆಂದು ಗುರುತಿಸುವಲ್ಲಿ 14 ವರ್ಷ ಮತ್ತು 18 ವರ್ಷಗಳೆಂಬ ಗೊಂದಲಗಳು ಇರುವುದನ್ನು ನಿವಾರಿಸುವ ಬಗ್ಗೆಯೂ ಚರ್ಚಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯಕ್ರಮಾಧಿಕಾರಿ ನಾಗೇಶ್ ಬಿಲ್ವ, ಕಾರ್ಮಿಕಾಧಿಕಾರಿ ಸಗೀರ್ ಪಾಶ, ವಕೀಲೆ ಎಂ.ವಿ. ಹೇಮಲತಾ, ಎಟಿಐ ಸಂಪನ್ಮೂಲ ವ್ಯಕ್ತಿ ಸದಾಶಿವ ಅವರು ಮುಖ್ಯ ಅತಿಥಿಗಳಾಗಿದ್ದರು. ಸಂಸ್ಥೆ ಕಾರ್ಯದರ್ಶಿ ಎಂ.ಎಸ್. ಹೇಮಾವತಿ ಇದ್ದರು.