ಯುಪಿಎಸ್ಸಿಯಲ್ಲಿ ಕಲಾ ಪದವೀಧರರ ಮೇಲುಗೈ
ಮೈಸೂರು: ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರಲ್ಲಿ ಕಲಾ ಪದವೀಧರರೆ ಹೆಚ್ಚು ಎಂದು 2012ನೇ ಬ್ಯಾಚ್ನ ಐಎಎಸ್ ಅಧಿಕಾರಿ ಅನೀಸ್ ಜಾಯ್ ಕಣ್ಮಣಿ ಹೇಳಿದರು.
ನಗರದಲ್ಲಿ ಪ್ರೊಬೆಷನರಿ ಹಂತದಲ್ಲಿರುವ ಅನೀಸ್ ಐಎಎಸ್ಗೆ ಆಯ್ಕೆಯಾದ ಮೊದಲ ನರ್ಸ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಕರ್ನಾಟಕ ಕೆಡರ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆಯೋಜಿಸಿರುವ ಐಎಎಸ್, ಕೆಎಎಸ್ ಸಹಿತ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಕ್ರಮದಲ್ಲಿ ಸಂವಾದ ನಡೆಸಿದರು.
ವಿಜ್ಞಾನ ಪದವೀಧರರು ಹೆಚ್ಚು ಐಎಎಸ್ಗೆ ಆಯ್ಕೆಯಾಗುತ್ತಾರೆ ಎನ್ನುವ ಭ್ರಮೆ ಬೇಡ. ನನ್ನ ಬ್ಯಾಚ್ನ 170ಕ್ಕೂ ಹೆಚ್ಚು ಅಧಿಕಾರಿಗಳಲ್ಲಿ ಕಲಾ ಪದವೀಧರರೇ ಹೆಚ್ಚಾಗಿದ್ದಾರೆ. ಇದರಿಂದ ಮನಸ್ಸಿನಿಂದ ಗೊಂದಲ ತೊಡೆದು ಹಾಕಿ ಎಂದು ಸಲಹೆ ನೀಡಿದರು.
ಯುಪಿಎಸ್ಸಿ ಪರೀಕ್ಷೆ ಎಂದರೆ ಬರೀ ಐಎಎಸ್ ಮಾತ್ರವಲ್ಲ, ಅದರಡಿ 24 ಕೇಂದ್ರ ಸರ್ಕಾರಿ ಸೇವೆಗಳು ಬರುತ್ತವೆ. ಇದರಿಂದ ಕೇವಲ ಐಎಎಸ್ ಎಂದು ಗುರಿ ಇಟ್ಟುಕೊಳ್ಳದೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ನೊಂದಿಗೆ ತೇರ್ಗಡೆ ಹೊಂದಲು ತಯಾರಿ ಮಾಡಿಕೊಳ್ಳುವಂತೆ ಅವರು ಹೇಳಿದರು.
ವನ್ಯಜೀವಿ ವಿಭಾಗದ ಡಿಸಿಎಫ್ ಕಮಲಾ ಕರಿಕಾಳನ್ ಮಾತನಾಡಿ, ಪದವಿ ಮುಗಿಸುವ ಹಂತದಲ್ಲಿಯೇ ನಿಮ್ಮ ಗುರಿ ಯಾವುದು ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಿ. ಹೆಚ್ಚಿನ ವ್ಯಾಸಂಗದ ಮೂಲಕ ಬೇರೆ ವೃತ್ತಿ ಆಯ್ಕೆ ಮಾಡಿಕೊಂಡರೆ ತೊಂದರೆ ಇಲ್ಲ.
ಯುಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳುವ ಉದ್ದೇಶವಿದ್ದರೆ ಅದಕ್ಕೆ ಪೂರಕವಾಗಿ ತಯಾರಿ ಮಾಡಿಕೊಳ್ಳಿ. ಬೇಗನೇ ಯಶಸ್ವಿಯಾಗಿ ಬದುಕನ್ನು ರೂಪಿಸಿಕೊಳ್ಳಿ, ತಡ ಮಾಡಿಕೊಂಡು ಪೋಷಕರಿಗೂ ಹೊರೆಯಾಗಬೇಡಿ ಎಂದು ತಿಳಿಸಿದರು.
ಹುಣಸೂರು ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಗೋಪಾಲಸಿಂಗ್, ಸುಸ್ಥಿರ ಅಭಿವೃದ್ಧಿ, ಬಡತನ, ಒಳಗೊಳ್ಳುವಿಕೆ ಹಾಗೂ ಕ್ರಮಗಳು ಎನ್ನುವ ಕುರಿತು ಉಪನ್ಯಾಸ ನೀಡಿದರು. ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು.