ಅಸಂಘಟಿತರಿಗಿಂತ ಸರ್ಕಾರಿ ನೌಕರರದ್ದೇ ಉತ್ತಮ ಜೀವನ
ನಂಜನಗೂಡು: ಸರ್ಕಾರಿ ನೌಕರರು ಇತರೆ ಅಸಂಘಟಿತ ವರ್ಗಕ್ಕಿಂತ ಉತ್ತಮ ಜೀವನ ನಿರ್ವಹಿಸುತ್ತಿರುವ ಭಾಗ್ಯವಂತರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪುರುಷೋತ್ತಮ್ ಇಂದಿಲ್ಲಿ ಅಭಿಪ್ರಾಯಪಟ್ಟರು. ಪಟ್ಟಣದ ಸರ್ಕಾರಿ ನೌಕರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2012-13ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಇಲಾಖೆ ಅಧಿಕಾರಿ ಟಿ.ಎಸ್. ಕುಮಾರಸ್ವಾಮಿ ಮಾತನಾಡಿ, ಶಿಕ್ಷಕರು ಹಾಗೂ ಪೋಷಕರು ಮಕ್ಕಳಿಗೆ ಮಾದರಿಯಾಗಿರಬೇಕೆಂದು ಹೇಳಿದರು. ಪೋಷಕರ ಪರ ಮಾತನಾಡಿದ ಶಿಕ್ಷಕ ಗಿರೀಶ್, ಈ ಸಮಾರಂಭವನ್ನು ಜೂನ್ ಅಥವಾ ಜುಲೈನಲ್ಲಿ ಹಮ್ಮಿಕೊಳ್ಳಬೇಕು. ಆ ಸಮಯವಾದರೆ ವಿದ್ಯಾರ್ಥಿಗಳೆ ಸ್ವತಃ ಪುರಸ್ಕಾರ ಸ್ವೀಕರಿಸುತ್ತಾರೆ. ಜನವರಿ ಅಥವಾ ಫೆಬ್ರವರಿಯಲ್ಲಾದರೆ ಮಕ್ಕಳಿಗೆ ಓದುವ ಕಡೆ ಹೆಚ್ಚಿನ ಗಮನವಿರುತ್ತದೆ. ಆದ್ದರಿಂದ ಅವರು ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯ ತಿಳಿಸಿದರು.
ಸ್ವಾಸ್ಥ್ಯ ವಿಮಾ ಯೋಜನೆಯಡಿ ನೋಂದಣಿ
ಮೈಸೂರು: ಜಿಲ್ಲೆಯಲ್ಲಿ ಈ ಸಾಲಿನಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯಡಿ 5,46,489 ಕುಟುಂಬಗಳನ್ನು ನೋಂದಾಯಿಸಲು ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಹೇಳಿದರು. ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆ ಅನುಷ್ಠಾನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದರಲ್ಲಿ 5,17,263 ಬಿಪಿಎಲ್ ಕುಟುಂಬಗಳು, 25,931 ಖಾತ್ರಿ ಯೋಜನೆ ಕಾರ್ಮಿಕರು 110 ರೇಲ್ವೆ ಕೂಲಿ ಹಾಗೂ 3,185 ಬೀಡಿ ಕಾರ್ಮಿಕರ ಕುಟುಂಬಗಳನ್ನು ನೋಂದಾಯಿಸಲಾಗುವುದು ಎಂದರು. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು. ಸ್ಮಾರ್ಟ್ ಕಾರ್ಡ್ ಹೊಂದಿರುವವರ ನೋಂದಾಯಿತ ಆಸ್ಪತ್ರೆಗಳಲ್ಲಿ ಒಳರೋಗಿಯಾಗಿ ಫಲಾನುಭವಿಗಳು 30 ಸಾವಿರವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು. ಫೆಬ್ರವರಿಯಿಂದ ಜಿಲ್ಲೆಯಲ್ಲಿ ನೋಂದಣಿ ಕಾರ್ಯ ಪ್ರಾರಂಭವಾಗಬೇಕು ಎಂದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.