ಆಹಾರ ಭದ್ರತೆ, ಕಿರು ಧಾನ್ಯಗಳ ಉಳಿವಿಗಾಗಿ ನಡಿಗೆ
ಮೈಸೂರು: ಕೃಷಿ ಜೀವ ವೈವಿಧ್ಯತೆ ಹಾಗೂ ಆಹಾರ ಭದ್ರತೆ ಮತ್ತು ಕಿರು ಧಾನ್ಯಗಳ ಉಳಿವಿಗಾಗಿ ಧಾನ್ ಫೌಂಡೇಷನ್ ಶನಿವಾರ ವಾಕಥಾನ್-2014 ಆಯೋಜಿಸಿತ್ತು.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಈ ನಡಿಗೆಗೆ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ನಗರಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಚಾಲನೆ ನೀಡಿದರು. ನಡಿಗೆಯು ಚಾಮರಾಜ ವೃತ್ತ, ಗಾಂಧಿ ಚೌಕ, ದೇವರಾಜ ಅರಸು ರಸ್ತೆ, ಜಿಲ್ಲಾಧಿಕಾರಿ ಕಚೇರಿ ಮೂಲಕ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಅಂತ್ಯಗೊಂಡಿತು.
ಮೈಸೂರು, ಬನ್ನೂರು, ಪಿರಿಯಾಪಟ್ಟಣ, ನಂಜನಗೂಡು, ಮಳವಳ್ಳಿ, ಕೊಳ್ಳೇಗಾಲದ ಕಳಂಜಿಯ ಮಹಿಳಾ ಸಂಘದ ಸದಸ್ಯರು ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಕಿರು ಧಾನ್ಯಗಳಾದ ಬಾರ್ಲಿ, ಊದಲು, ಬರಗು, ಆರ್ಕ, ಸಾಮೆ, ಸಜ್ಜೆ, ರಾಗಿ, ನವಣೆ, ಜೋಳ ಇತ್ಯಾದಿಗಳಲ್ಲಿ ಉತ್ತಮ ರೋಗ ನಿರೋಧಕ ಶಕ್ತಿ ಇದೆ. ಈ ಧಾನ್ಯಗಳನ್ನು ಅಲ್ಪಾವಧಿಯಲ್ಲಿ ಒಣ ಬೇಸಾಯ ಮಾಡಬಹುದಾಗಿದೆ. ಕಿರು ಧಾನ್ಯಗಳನ್ನು ಸೂಕ್ತ ರೀತಿಯಲ್ಲಿ ಬಳಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹವು ದೃಢಕಾಯ ಹಾಗೂ ಗಟ್ಟಿಮುಟ್ಟಾಗಿ ಆರೋಗ್ಯವಂತರಾಗಿಲು ಸಾಧ್ಯವಾಗುತ್ತದೆ ಎಂಬುದನ್ನು ನಡಿಗೆಯಲ್ಲಿ ಸಾರಿದರು.
ಅಪೌಷ್ಟಿಕತೆ ಕಾಡುತ್ತಿದೆ: ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕೃಷಿ ಜಂಟಿ ನಿರ್ದೇಶಕ ಡಾ. ಮಹಾಂತೇಶಪ್ಪ, ದೇಶದಲ್ಲಿ ಸಾಕಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ ಇದೆ. ಅಪೌಷ್ಟಿಕತೆ ಹೋಗಲಾಡಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.