ಗ್ರಾಮ ಕಾನೂನು ಸಲಹಾ ಕೇಂದ್ರ ಉದ್ಘಾಟನೆ
ಮೈಸೂರು: ತಾಲೂಕಿನ ಮೆಲ್ಲಳ್ಳಿ- ಹಾರೋಹಳ್ಳಿಯಲ್ಲಿ ಸ್ಥಾಪಿಸಲಾದ ಗ್ರಾಮ ಕಾನೂನು ಸಲಹಾ ಕೇಂದ್ರಕ್ಕೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ನಂದಕುಮಾರ್ ಚಾಲನೆ ನೀಡಿದರು. ಕಾನೂನು ಸಲಹಾ ಸೇವೆಯನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವ ಆಶಯದಂತೆ, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಲಾ ಒಂದು ಗ್ರಾಮದಲ್ಲಿ ಗ್ರಾಮ ಕಾನೂನು ಸಲಹಾ ಕೇಂದ್ರ ಸ್ಥಾಪಿಸಲಾಗಿದೆ. ಗ್ರಾಮೀಣ ಪ್ರದೇಶದ ಜನರು ಕಾನೂನು ಮಾಹಿತಿ ಹಾಗೂ ಕಾನೂನು ನೆರವು ಪಡೆಯಲು ಇದರಿಂದ ನೆರವಾಗುತ್ತಿದೆ ಎಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಪುಷ್ಪಾ, ಉಪಾಧ್ಯಕ್ಷೆ ದೇವಮ್ಮ, ತಾಪಂ ಉಪಾಧ್ಯಕ್ಷ ಸಿದ್ದಯ್ಯ, ವಕೀಲ ಉಮೇಶ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಬೋರೇಗೌಡ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಎಂ. ಮಹದೇವಸ್ವಾಮಿ ಭಾಗವಹಿಸಿದ್ದರು.
ಗೌರವಧನ ಹೆಚ್ಚಳಕ್ಕೆ ಅತಿಥಿ ಉಪನ್ಯಾಸಕರ ಆಗ್ರಹ
ಮೈಸೂರು: ಗೌರವಧನ 25,000 ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಂಘದವರು ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು ಎದುರು ಶನಿವಾರ ಪ್ರತಿಭಟಿಸಿದರು. ಅತಿಥಿ ಉಪನ್ಯಾಸಕರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕೆಪಿಎಸ್ಸಿ, ನೇರ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡಬೇಕು. ಸೇವಾ ಹಿರಿತನಕ್ಕೆ ಆದ್ಯತೆ ಕೊಡಬೇಕು. ಹಾಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನೇ ಮುಂದಿನ ಶೈಕ್ಷಣಿಕ ವರ್ಷಗಳಲ್ಲೂ ಮುಂದುವರಿಸಿ, ಸೇವಾ ಭದ್ರತೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ರಾಜ್ಯ ಸರ್ಕಾರವು ಕಡೆಗಣಿಸಿದರೆ ಜ.27 ರಂದು ಬೆಂಗಳೂರು ರೈಲು ನಿಲ್ದಾಣದಿಂದ ಮೆರವಣಿಗೆ ಹೊರಟು ಮುಖ್ಯಮಂತ್ರಿಯವರ ಮನೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಅವರು ಎಚ್ಚರಿಸಿದರು. ಕಾಲೇಜು ಶಿಕ್ಷಣ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಪ್ರೊ.ನಟರಾಜ ಅರಸ್ ಅವರು ಅತಿಥಿ ಉಪನ್ಯಾಸಕರ ಮನವಿ ಸ್ವೀಕರಿಸಿದರು.