ಬುಡಕಟ್ಟು ಯುವತಿ ಮೇಲಿನ ಅತ್ಯಾಚಾರಕ್ಕೆ ಖಂಡನೆ
ಮೈಸೂರು: ಪಶ್ಚಿಮ ಬಂಗಾಳದ ಭೀರ್ಭೂಮ್ ಗ್ರಾಮದಲ್ಲಿ ಬುಡಕಟ್ಟು ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ (ಎಐಎಂಎಸ್ಎಸ್) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟಿಸಿದರು. ಮೇಲ್ಜಾತಿಯ ಯುವಕನನ್ನು ಪ್ರೀತಿಸಿದ ಯುವತಿಗೆ ಸ್ಥಳೀಯ ಬುಡಕಟ್ಟು ಪಂಚಾಯತ್ ದಂಡ ವಿಧಿಸಿದೆ. ಆದರೆ, ದಂಡ ಪಾವತಿಸಲು ಸಾಧ್ಯವಿಲ್ಲವೆಂದು ಯುವತಿ ನಿರಾಕರಿಸಿದ್ದಕ್ಕೆ ರಾತ್ರಿಯಿಡಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲು ಪಂಚಾಯತ್ ಆದೇಶಿಸಿದೆ. ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರಜಾತಂತ್ರದಲ್ಲಿ ಸರ್ಕಾರಗಳು ಸ್ತ್ರೀ- ಪುರುಷರು ಸಮಾನರು ಎನ್ನುವ ಧೋರಣೆ ಸಮಾಜದಲ್ಲಿ ನೆಲೆಯೂರುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಎಐಎಂಎಸ್ಎಸ್ ಜಿಲ್ಲಾ ಉಪಾಧ್ಯಕ್ಷೆ ಸೀಮಾ, ಜಿಲ್ಲಾ ಕಾರ್ಯದರ್ಶಿ ಸಂಧ್ಯಾ, ಸದಸ್ಯರಾದ ಶೀಬಾ, ಪೂರ್ಣಿಮಾ ಕೋಟಾ, ಸುಮ, ರಂಜಿತಾ ಇದ್ದರು.
ಸ್ವಾಸ್ಥ್ಯ ವಿಮಾ ಯೋಜನೆಯಡಿ ನೋಂದಣಿ
ಮೈಸೂರು: ಜಿಲ್ಲೆಯಲ್ಲಿ ಈ ಸಾಲಿನಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯಡಿ 5,46,489 ಕುಟುಂಬಗಳನ್ನು ನೋಂದಾಯಿಸಲು ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಹೇಳಿದರು. ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆ ಅನುಷ್ಠಾನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದರಲ್ಲಿ 5,17,263 ಬಿಪಿಎಲ್ ಕುಟುಂಬಗಳು, 25,931 ಖಾತ್ರಿ ಯೋಜನೆ ಕಾರ್ಮಿಕರು 110 ರೇಲ್ವೆ ಕೂಲಿ ಹಾಗೂ 3,185 ಬೀಡಿ ಕಾರ್ಮಿಕರ ಕುಟುಂಬಗಳನ್ನು ನೋಂದಾಯಿಸಲಾಗುವುದು ಎಂದರು. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು. ಸ್ಮಾರ್ಟ್ ಕಾರ್ಡ್ ಹೊಂದಿರುವವರ ನೋಂದಾಯಿತ ಆಸ್ಪತ್ರೆಗಳಲ್ಲಿ ಒಳರೋಗಿಯಾಗಿ ಫಲಾನುಭವಿಗಳು 30 ಸಾವಿರವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು. ಫೆಬ್ರವರಿಯಿಂದ ಜಿಲ್ಲೆಯಲ್ಲಿ ನೋಂದಣಿ ಕಾರ್ಯ ಪ್ರಾರಂಭವಾಗಬೇಕು ಎಂದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.