ರಾಜ್ಯಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆ
ರಾವಂದೂರು: ಗ್ರಾಮೀಣ ಪ್ರದೇಶದಲ್ಲಿ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗುವ ಮೂಲಕ ಸಾಧನೆ ಮೆರೆದಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಸಾಧನೆ ಮಾಡಿದವರಾಗಿದ್ದಾರೆ. ಈ ಶಾಲೆಯ ಸಮೀರ್, ಎಂ.ಎಸ್. ಸಾಗರ್, ಅಕೀಲ್, ಧನಂಜಯ ಕವ್ವಾಲಿ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಂಗೀತ ಶಿಕ್ಷಕ ಮೋಹನ್ ಮೇರವಾಡೆ ಮಾರ್ಗದರ್ಶನದ ಈ ವಿದ್ಯಾರ್ಥಿಗಳ ತಂಡ 2ನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿದ್ದು, ಕಳೆದ ಬಾರಿ ರಾಜ್ಯಮಟ್ಟದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿತ್ತು. ಈ ಕಲಾತಂಡ ಮೈಸೂರು, ಕೊಡಗು, ಹಾಸನ ಮುಂತಾದ ಕಡೆ ಆಕಾಶವಾಣಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ವಿದ್ಯಾರ್ಥಿಗಳ ತಂಡಕ್ಕೆ ಶಾಲಾ ಮುಖ್ಯೋಪಾಧ್ಯಾಯ ಯೋಗೇಶ್ ಮತ್ತು ಶಿಕ್ಷಕರ ವೃಂದ ಶುಭ ಹಾರೈಸಿದೆ.
ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳು: ಸ್ವಾಮೀಜಿ ವಿಷಾದ
ರಾವಂದೂರು: ಗ್ರಾಮೀಣ ಪ್ರದೇಶದಲ್ಲಿ ಕ್ರಿಕೆಟ್ ಹೆಚ್ಚು ಜನಪ್ರಿಯ ಕ್ರೀಡೆಯಾಗಿದ್ದು, ಜನಪದ ಕ್ರೀಡೆಗಳು ದೂರ ಸರಿಯುತ್ತಿವೆ ಎಂದು ಮುರುಘಾಮಠದ ಮೋಕ್ಷಪತಿ ಸ್ವಾಮೀಜಿ ವಿಷಾದಿಸಿದರು. ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಗ್ರಾಮದಲ್ಲಿ ಬಸವೇಶ್ವರ ಕ್ರಿಕೆಟ್ ಕ್ಲಬ್ ವತಿಯಿಂದ 9ನೇ ವರ್ಷದ ವಿಷ್ಣು ಗೋಲ್ಡನ್ಕಪ್ ಜಿಲ್ಲಾ ಮಟ್ಟದ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆ ಯುವಕರನ್ನು ಸದೃಢರನ್ನಾಗಿಸುವುದರೊಂದಿಗೆ ಅವರಿಗೆ ಮನೋಬಲ ನೀಡುತ್ತದೆ. ಕ್ರೀಡೆಯ ಕಡೆ ಗಮನ ಹರಿಸುವುದರಿಂದ ಯುವಕರು ದುಶ್ಚಟಗಳಿಂದ ದೂರ ಉಳಿಯುತ್ತಾರೆ. ಆದ್ದರಿಂದ ಪ್ರತಿಯೊಬ್ಬರು ಕ್ರೀಡಾಪಟುಗಳಾಗಿ ಮಾರ್ಪಡಬೇಕು. ಕ್ರೀಡೆಯೊಂದಿಗೆ ವ್ಯಾಸಂಗಕ್ಕೂ ಅಷ್ಟೆ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.
ಪುರಸಭೆ ಮಾಜಿ ಸದಸ್ಯ ಎಲ್ಲಪ್ಪ ನಿಧನ
ಹುಣಸೂರು: ಹುಣಸೂರು ಪಟ್ಟಣದ ಪುರಸಭಾ ಮಾಜಿ ಸದಸ್ಯ ಹಾಗೂ ದೇವರಾಜ ಅರಸರ ಒಡನಾಡಿ ಎಲ್ಲಪ್ಪ (89) ಅವರು ಸ್ವಗೃಹದಲ್ಲಿ ಶನಿವಾರ ನಿಧನರಾದರು. ಇವರ ಪುತ್ರರಾದ ಎಚ್.ವೈ. ಮಹದೇವ್ ಪುರಸಭೆ ಸದಸ್ಯ, ಜನತಾ ಬಜಾರ್ ಕಸಬಾ ಪ್ರಾಥಮಿಕ ಸಹಕಾರ ಬ್ಯಾಂಕ್, ಟಿಎಪಿ ಸಿಎಂಎಸ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಚ್.ವೈ. ಕೃಷ್ಣ, ಸುನಿಲ್ ಸೇರಿದಂತೆ ನಾಲ್ವರು ಪುತ್ರರು ಮತ್ತು ನಾಲ್ವರು ಪುತ್ರಿಯರನ್ನು ಇದ್ದಾರೆ. ಅಂತ್ಯಕ್ರಿಯೆಯಲ್ಲಿ ಮಾಜಿ ಸಚಿವ ಜಿ.ಟಿ. ದೇವೇಗೌಡ, ಶಾಸಕರಾದ ಎಚ್.ಪಿ. ಮಂಜುನಾಥ್, ಎಸ್. ಚಿಕ್ಕಮಾದು, ಸಿ.ಎಚ್. ವಿಜಯಶಂಕರ್, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಚಂದ್ರಶೇಖರ್, ನಿರ್ದೇಶಕ ಜಿ.ಡಿ. ಹರೀಶ್ಗೌಡ ಪಾಲ್ಗೊಂಡಿದ್ದರು.