ಶಿಕ್ಷಣ ಮೂಲಭೂತ ಹಕ್ಕು
ಕ.ಪ್ರ.ವಾರ್ತೆ ಮೈಸೂರು ಜ. 25
ಪ್ರತಿಯೊಂದು ಮಗುವಿಗೂ ಶಿಕ್ಷಣ ಮೂಲಭೂತ ಹಕ್ಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಹೇಳಿದರು.
ಕನ್ನಡ ಜನ ಜಾಗೃತಿ ಸಂಘ ದತ್ತು ಪಡೆದಿರುವ ದೇವರಾಜ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು ವತಿಯಿಂದ ಮಹಾರಾಜ ಪದವಿಪೂರ್ವ ಕಾಲೇಜು ಕೃಷ್ಣರಾಜ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಮಾಜದಲ್ಲಿ ಯಾವುದೇ ಜಾತಿ, ಧರ್ಮ, ಬಡವ ಶ್ರೀಮಂತ ಎಂಬ ಭೇದಭಾವವಿಲ್ಲದೆ ಪ್ರತಿಯೊಬ್ಬರಿಗೂ ಶಿಕ್ಷಣ ದೊರಕಬೇಕೆಂಬ ಉದ್ದೇಶದಿಂದ ಅಂಗನವಾಡಿಯಿಂದ ಪದವಿಪೂರ್ವ ಶಿಕ್ಷಣದವರೆಗೆ ಮಹತ್ವದ ಒತ್ತನ್ನು ಸರ್ಕಾರ ಕೈಗೊಂಡಿದೆ. ಅಲ್ಲದೆ ಶಿಕ್ಷಣದ ಹಕ್ಕು ಕಾಯ್ದೆ ಜಾರಿಗೊಳಿಸುವ ಮೂಲಕ ಬಡವರ ಮಕ್ಕಳು ಸಹ ಪ್ರತಿಷ್ಠಿತ ಶಾಲೆಯಲ್ಲಿ ಓದುವ ಅವಕಾಶ ಕಲ್ಪಿಸಲಾಗಿದೆ ಎಂದರು.
ಸರ್ಕಾರಿ ಶಾಲೆಗಳು ವಿವಾದಕ್ಕೆ ಗುರಿಯಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಕೊರತೆ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತುಗಳಿವೆ. ಈಗಾಗಲೇ ಮೈಸೂರಿನಲ್ಲಿ ಅನೇಕ ಸರ್ಕಾರಿ ಶಾಲೆಗಳು ಮುಚ್ಚಿವೆ. ಈ ದಿಸೆಯಲ್ಲಿ ಇಲ್ಲಿನ ಎನ್ಟಿಎಂಎಸ್ ಶಾಲೆಯನ್ನು ಮುಚ್ಚಬೇಕೆ ಅಥವಾ ಬೇಡವೇ ಎಂಬ ಜಿಜ್ಞಾಸೆಯಿದೆ ಎಂದು ತಿಳಿಸಿದರು.
ಖಾಸಗಿ ಶಾಲೆಯತ್ತ ಆಕರ್ಷಿತ: ಪೋಷಕರು ಖಾಸಗಿ ಶಾಲೆಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದು, ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸಲು ಹಣ ಎಷ್ಟೇ ಖರ್ಚಾದರೂ ಪರವಾಗಿಲ್ಲ ಖಾಸಗಿ ಶಾಲೆಯಲ್ಲಿ ಕಲಿಸಲು ಬಯಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಸರ್ಕಾರ ಅನೇಕ ಸವಲತ್ತುಗಳನ್ನು ಕಲ್ಪಿಸಿದೆ. ಇದನ್ನು ಬಳಸಿಕೊಳ್ಳಲು ಪೋಷಕರು ಮುಂದಾಗಬೇಕು ಎಂದು ಆಶಿಸಿದರು.
ನಗರ ಪಾಲಿಕೆ ಸದಸ್ಯ ಪಿ.ಪ್ರಶಾಂತಗೌಡ, ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಂ. ಪುಟ್ಟು, ಶಿವಾಯನಮಃ ಮಠದ ಮುಖ್ಯಸ್ಥ ಪ್ರಭು, ಮಹಾರಾಜ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸಿದ್ದರಾಜು ಮುಖ್ಯ ಅತಿಥಿಗಳಾಗಿದ್ದರು. ಕನ್ನಡ ಜನಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ನಗರ ಪಾಲಿಕೆ ಪ್ರತಿಪಕ್ಷ ನಾಯಕ ಡಿ.ನಾಗಭೂಷಣ್ ಸ್ವಾಗತಿಸಿದರು. ದೇವರಾಜ ಕಾಲೇಜಿನ ಪ್ರಾಂಶುಪಾಲೆ ಡಾ. ಬಿ.ಎನ್. ನಾಗರತ್ನ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನ ಆರ್ ಸುಜಾತ, ಮಹಾರಾಣಿ ಸರ್ಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲೆ ವಸಂತಕುಮಾರಿ ಇದ್ದರು. ವಿದ್ಯಾರ್ಥಿನಿಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ದಲಿತರ ಬಹಿಷ್ಕಾರ: ಕ್ರಮಕ್ಕೆ ಆಗ್ರಹ
ಮೈಸೂರು: ದಲಿತ ಕುಟುಂಬವೊಂದು ಸ್ವಜಾತಿಯವರಿಂದಲೇ ಬಹಿಷ್ಕಾರಕ್ಕೊಳಗಾಗಿರುವ ಮೈಸೂರು ತಾಲೂಕಿನ ಮಾವನಿಹಳ್ಳಿ ಲೇ. ಹೊನ್ನೂರಯ್ಯ ಎಂಬವರ ಪುತ್ರ ವೆಂಕಟರಾಜು ಮತ್ತು ಕುಟುಂಬಕ್ಕೆ ಜಿಲ್ಲಾಡಳಿತವು ಗ್ರಾಮದಲ್ಲಿ ವಾಸಿಸಲು ಮನೆ ನೀಡಬೇಕು. ಈ ಕುಟುಂಬ ಬಹಿಷ್ಕಾರಕ್ಕೆ ಕಾರಣರಾದವರನ್ನು ಕೂಡಲೇ ಬಂಧಿಸಿ, ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ದಲಿತ ವೇದಿಕೆಯ ರಾಜ್ಯಾಧ್ಯಕ್ಷ ಎಂ. ನರಸಿಂಹಮೂರ್ತಿ ಆಗ್ರಹಿಸಿದ್ದಾರೆ. ಈ ವಿಚಾರದಲ್ಲಿ ವಿಳಂಬ ಮಾಡಿದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿರುವ ಅವರು, ಈ ಬಗ್ಗೆ ಜಿಲ್ಲಾಧಿಕಾರಿ, ಎಸ್ಪಿ, ತಹಸೀಲ್ದಾರ್ ಅವರು ಕೂಡಲೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಫ್ತುದಾರರ ಸಮಾವೇಶ
ಸುತ್ತೂರು: ಸುತ್ತೂರು ಶ್ರೀಕ್ಷೇತ್ರದಲ್ಲಿ ಜ.27 ರಿಂದ ಫೆ.1 ರವರೆಗೆ ನಡೆಯುವ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಜಾತ್ರೆಗೆ ಸಂಬಂಧಿಸಿದ ಫ್ಲೆಕ್ಸ್ಗಳನ್ನು ಮಾತ್ರ ಹಾಕಬೇಕೆಂದು ಜಾತ್ರಾ ಮಹೋತ್ಸವ ಸಮಿತಿಯ ಸಂಚಾಲಕ ಎನ್.ಶಿವಕುಮಾರಸ್ವಾಮಿ ಹೇಳಿದ್ದಾರೆ. ಶುಭಾಶಯ ಕೋರುವ ಅಥವಾ ವ್ಯಕ್ತಿಗಳ ಭಾವಚಿತ್ರಗಳನ್ನೊಳಗೊಂಡ ಫ್ಲೆಕ್ಸ್ಗಳನ್ನು ಹಾಕುವುದು ಸೂಕ್ತವಲ್ಲವೆಂದು ಸಮಿತಿ ತೀರ್ಮಾನಿಸಿದೆ.