ಒಳ್ಳೆದು ಮಾಡಿ ಒಂದು ದಿನ ಬದುಕಿ
ಎಚ್.ಡಿ. ಕೋಟೆ: ಅಪ್ರಯೋಜಕನೆಂದು ನೂರು ವರ್ಷ ಬದುಕುವುದಕ್ಕಿಂತ ಸಕಲರಿಗೆ ಒಳ್ಳೆಯದನ್ನು ಮಾಡಿ ಒಂದು ದಿನ ಬದುಕುವುದು ಲೇಸು ಎಂದು ಕಾವೇರಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಶಿವಕುಮಾರಸ್ವಾಮಿ ಹೇಳಿದರು.
ಶನಿವಾರ ಬೀಚನಹಳ್ಳಿ ಮಠದಲ್ಲಿ ನಡೆದ ಶರಣ ಸಾಹಿತ್ಯ ಚಿಂತನಾ ಸಮಾವೇಶದಲ್ಲಿ ಉಪನ್ಯಾಸ ನೀಡಿದ ಅವರು, ಮನುಷ್ಯ ದಿಢೀರ್ ಶ್ರೀಮಂತನಾಗಬೇಕೆಂಬ ಕೆಟ್ಟ ನಡುವಳಿಕೆ ಮೈಗೂಡಿಸಿಕೊಂಡು ಮಾಡಬಾರದ ಕೆಲಸ ಮಾಡಿ ಇಲ್ಲದ ಅನಾಹುತಗಳನ್ನು ತಂದುಕೊಳ್ಳುತ್ತಿದ್ದಾನೆ. ಶರಣರ ಚಿಂತನೆ, ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಸತ್ಪ್ರಜೆಯಾಗಿ ರೂಪುಗೊಳ್ಳಬೇಕೆಂದು ಕರೆ ನೀಡಿದರು.
ಡಯಟ್ ಹಿರಿಯ ಉಪನ್ಯಾಸಕ ಸ್ವಾಮಿ ಮಾತನಾಡಿ, ಬಡವರ ಮಗನನ್ನು ಬಡವ ಎಂದು, ಶ್ರೀಮಂತರ ಮಗನನ್ನು ಶ್ರೀಮಂತ ಎಂದು ಕರೆಯಬಹುದು. ಆದರೆ ಲಿಂಗಾಯತರ ಮಗನನ್ನು ಲಿಂಗಾಯತ ಎಂದು ಕರೆಯಲು ಸಾಧ್ಯವಿಲ್ಲ. ಏಕೆಂದರೆ ಲಿಂಗಾಯತನ ಮಗ ಲಿಂಗ ಧರಿಸಿದರೆ ಮಾತ್ರ ಲಿಂಗಾಯತ ಎಂದು ಕರೆಯಬಹುದು ಎಂದು ಅಭಿಪ್ರಾಯಪಟ್ಟರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಎಸ್. ಕುಮಾರಸ್ವಾಮಿ, ಬಸವಣ್ಣನವರ ಮನೆಯಾದ ಮಹಾಮನೆ ಹನ್ನೆರಡನೇ ಶತಮಾನದಲ್ಲಿ ಸಮಾಜದ ಎಲ್ಲಾ ಜನರನ್ನು ಜಾತಿ ಭೇದವಿಲ್ಲದೆ ದೇಶದ ಮೂಲೆ ಮೂಲೆಗಳಿಂದ ಆಕರ್ಷಿಸಿ ವರ್ಣರಹಿತ ಸಮಾಜಕ್ಕೆ ಭದ್ರ ಬುನಾದಿ ಹಾಕಿತು. ಅಂತಹ ವರ್ಣರಹಿತ ಸಮಾಜ ನಿರ್ಮಾಣಕ್ಕೆ 21ನೇ ಶತಮಾನದಲ್ಲಾದರೂ ನಾವು ಪ್ರಯತ್ನಿಸಬೇಕು. ನಾವು ದೇವರನ್ನು ನಮ್ಮ ಮಟ್ಟಕ್ಕೆ ತರುವುದಕ್ಕಿಂತ ದೇವರ ಮಟ್ಟಕ್ಕೆ ಏರುವ ಪ್ರಯತ್ನ ಮಾಡಿ. ಅಂತರಂಗ ಶುದ್ಧ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.
ಶ್ರೀ ಮಹದೇವ ಸ್ವಾಮೀಜಿ ಆಶೀರ್ವಚನ ನೀಡಿದರು. ಹಂಚೀಪುರ ಗುರುಸ್ವಾಮಿ, ಗಣಪತಿ, ಗಿರೀಶ್ಮೂರ್ತಿ, ಮಹದೇವಸ್ವಾಮಿ, ಪ್ರಕಾಶ್, ಮಾದಪ್ಪ, ಮಹದೇವಮ್ಮ, ರಘು, ಸತೀಶ್, ಸ್ವಾಮಿ, ಸತೀಶ್ಚಂದ್ರ, ವಿಶ್ವನಾಥ್ ಇದ್ದರು.