ದೇಶಕ್ಕಾಗಿ ಮತ ನೀಡಿ: ರಾಮದಾಸ್
ಪಿರಿಯಾಪಟ್ಟಣ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ದೇಶಕ್ಕಾಗಿ ಮತ ನೀಡಿ ಎಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಮನವಿ ಮಾಡಿದರು.
ತಾಲೂಕಿನ ಚಿಟ್ಟೇನಹಳ್ಳಿ ಗ್ರಾಮದಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ ಮನೆ ಮನೆಗೆ ಬಿಜೆಪಿ ಹಾಗೂ ಲೋಹ ಸಂಗ್ರಹ ಅಭಿಯಾನದ ಮೂರು ದಿನಗಳ ತಾಲೂಕು ಪ್ರವಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುಪಿಎ ಸರ್ಕಾರದ ಭ್ರಷ್ಟಾಚಾರ, ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದ ಸಾಧನೆಗಳನ್ನು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ದೇಶದ ಭವಿಷ್ಯದ ಬಗ್ಗೆ ಕಾಳಜಿಯುಳ್ಳ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ಹಾಗೂ ಕಾಂಗ್ರೆಸ್ ತೊಲಗಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಬಿಜೆಪಿಗೆ ಮತ ನೀಡಬೇಕು. ಇದು ದೇಶದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಯುಪಿಎ ಸರ್ಕಾರ ಕಳೆದ 10 ವರ್ಷದಲ್ಲಿ ವಿಶ್ವದಲ್ಲಿಯೇ ಯಾವ ಸರ್ಕಾರವೂ ಮಾಡದ ಎ ಟು ಝಡ್ ಭ್ರಷ್ಟಾಚಾರದ ಸಾಧನೆ ಮಾಡಿದ್ದು ಇಂದು ದೇಶ ವಿದೇಶಿಯರ ಮುಂದೆ ತಲೆತಗ್ಗಿಸುವಂತೆ ಮಾಡಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಪಕ್ಷ ಹೊರತಂದಿರುವ ಮನೆ ಮನೆಗೆ ಬಿಜೆಪಿ ಕಾರ್ಯಕ್ರಮದ ಮೂರು ಬಗೆಯ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಗ್ರಾಮದ ಉಮಾ ಮಹೇಶ್ವರ ದೇವಾಲಯದ ಮುಂಭಾಗದಿಂದ ಮಣ್ಣು ಹಾಗೂ ರೈತರು ಉಪಯೋಗಿಸಿದ ಲೋಹವನ್ನು ಸಂಗ್ರಹಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದಿಂದ ನರೇಂದ್ರಮೋದಿ ಹಾಗೂ ಪಕ್ಷದ ಚಿನ್ಹೆಯುಳ್ಳ ವಾಹನ ಹಾಗೂ ಬೈಕ್ ರ್ಯಾಲಿ ನಡೆಯಿತು.
ಪಕ್ಷದ ತಾ. ಅಧ್ಯಕ್ಷ ಆರ್.ಟಿ. ಸತೀಶ್, ಪದಾಧಿಕಾರಿಗಳಾದ ಪಿ.ವಿ. ಬಸವರಾಜಪ್ಪ, ಕೆ.ಕೆ. ಶಶಿ, ಎಂ.ಎಂ. ರಾಜೇಗೌಡ, ಪ್ರಸನ್ನಕೇಶವ, ವಿಕ್ರಂರಾಜ್, ಲೋಕಪಾಲಯ್ಯ, ಕೃಷ್ಣ, ಪಟ್ಟಸ್ವಾಮಿ, ಶಿವಸ್ವಾಮಿ, ಶ್ರೀನಿವಾಸ್, ಆಶಾ, ಭಾಗ್ಯ, ಆನಂದ್ ಇದ್ದರು.