ಬಾಲಕಿಯರ ಶಾಲೆಗೆ ಮೂಲ ಸೌಲಭ್ಯ: ಶಾಸಕ ಚಿಕ್ಕಮಾದು
ಎಚ್.ಡಿ. ಕೋಟೆ: ಬಾಲಕಿಯರ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಮುಂಬರುವ ಬಜೆಟ್ನಲ್ಲಿ ಪ್ರಸ್ತಾಪಿಸಿ ಮಂಜೂರು ಮಾಡಿಸುವುದಾಗಿ ಶಾಸಕ ಎಸ್. ಚಿಕ್ಕಮಾದು ಭರವಸೆ ನೀಡಿದರು.
ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಮತ್ತು ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾಲಕಿಯರ ಶಾಲೆಯಲ್ಲಿ 1,500 ವಿದ್ಯಾರ್ಥಿಗಳಿದ್ದು, ಕೊಠಡಿಗಳ ಸಂಖ್ಯೆ ಬಹಳ ಕಡಿಮೆ ಇದೆ. ಮುಂಬರುವ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ 6 ಕೊಠಡಿಗಳನ್ನು ಶೀಘ್ರ ನಿರ್ಮಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದರು. ಪ್ರಾಂಶುಪಾಲ ಶಿವಪ್ಪ ಮಾತನಾಡಿದರು.
ಸನ್ಮಾನ: ಪಟ್ಟಣದ ಬಾಲಿಕ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಬಾಲಸುಬ್ರಹ್ಮಣ್ಯ ಹಾಗೂ ಕನ್ನಡ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದ ಪ್ರೇಮ ಸರೋಜ ಅವರನ್ನು ಸನ್ಮಾನಿಸಲಾಯಿತು. ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಅಂಕನಾಯಕ ಅವರು ಮೈಸೂರಿನ ಮಹಾರಾಣಿ ಕಾಲೇಜಿಗೆ ವರ್ಗಾವಣೆಯಾದ ಹಿನ್ನೆಲೆ ಬೀಳ್ಕೊಡಲಾಯಿತು. ನಂತರ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ನೆಮ್ಮದಿ ಜೀವನ ನಡೆಸಲು ಅವಕಾಶ ನೀಡಿ
ನಂಜನಗೂಡು: ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳು ಸ್ವತಂತ್ರ ಮತ್ತು ನೆಮ್ಮದಿಯಿಂದ ಜೀವನ ನಡೆಸಲು ಸಮಾಜ ಅವಕಾಶ ನೀಡಬೇಕೆಂದು ಇಲ್ಲಿನ ಸಿವಿಲ್ ನ್ಯಾಯಾಧೀಶ (ಹಿರಿಯ ಶ್ರೇಣಿ) ರವೀಂದ್ರ ಜೋಷಿ ಹೇಳಿದರು. ಹುಲ್ಲಹಳ್ಳಿ ವೃತ್ತದಲ್ಲಿ ಶನಿವಾರ ಸಿಡಿಪಿಒ ಹಾಗೂ ರೋಟರಿ ಸಂಸ್ಥೆ ಆಯೋಜಿಸಿದ್ದ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವ ಆಂದೋಲನ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಲ್ಲರೆ ವಿವೇಕ ಕಲಾ ತಂಡದವರು ಬೀದಿ ನಾಟಕ ನಡೆಸಿಕೊಟ್ಟರು. ಮಹಿಳೆಯರ ಜಾಥಾ ಎಂಜಿಎಸ್ ರಸ್ತೆ ಮೂಲಕ ಗುರುಭವನದಲ್ಲಿ ಅಂತ್ಯಗೊಂಡಿತು. ತಾಪಂ ಅಧ್ಯಕ್ಷ ಎಸ್.ಎಂ. ಮಲ್ಲಿಕಾರ್ಜುನಸ್ವಾಮಿ, ರೋಟರಿ ಅಧ್ಯಕ್ಷ ರಾಮಚಂದ್ರು, ತಾಪಂ ಉಪಾಧ್ಯಕ್ಷೆ ಚಿಕ್ಕೀರಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ, ಕೃಷ್ಣಮೂರ್ತಿ, ಬಾಲಸುಬ್ರಹ್ಮಣ್ಯಂ, ಕನಕರಾಜು, ಪರಶುರಾಮ, ಅಧಿಕಾರಿಗಳಾದ ರಾಜಮ್ಮ, ಲಕ್ಷ್ಮಿ ಭಾಗವಹಿಸಿದ್ದರು.