ರಸ್ತೆಗೆ ಅಂಬೇಡ್ಕರ್, ದೇವನೂರ ಮಹಾದೇವ ಹೆಸರಿಡಲಿ
ಮೈಸೂರು ನಗರ, ಗ್ರಾಮಾಂತರದ ಪೌರ ಸಮಸ್ಯೆಗಳ ಕುರಿತು ಪ್ರತಿ ಸೋಮವಾರ ಪ್ರಕಟಿಸಲಾಗುವುದು. ನಾಗರಿಕರು ತಮ್ಮ ಬಡಾವಣೆಯ ಸಮಸ್ಯೆಗಳನ್ನು ಪತ್ರ ಬರೆದು ತಿಳಿಸಬಹುದು. ಸಮಸ್ಯೆಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಕಚೇರಿ ವಿಳಾಸಕ್ಕೆ ಕಳುಹಿಸಬಹುದು.
ರಸ್ತೆಗೆ ಅಂಬೇಡ್ಕರ್, ದೇವನೂರ ಮಹಾದೇವ ಹೆಸರಿಡಲಿ
ನಂಜನಗೂಡು ತಾಲೂಕಿನವರೇ ಆದ ಚಿಂತಕ, ಸಾಹಿತಿ ದೇವನೂರ ಮಹಾದೇವ ಅವರು ಈ ಸಂಘಟನೆಯ ಜೊತೆ ಗುರುತಿಸಿಕೊಂಡು ದಲಿತ ಚಳವಳಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡವರು. ಜನಪರವಾದ ಸಂವಿಧಾನದ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅದಕ್ಕಾಗಿ ನಂಜನಗೂಡಿನ ಅಂಬೇಡ್ಕರ್ ಭವನದ ಎದುರಿನ ಜೋಡಿ ರಸ್ತೆಗೆ (ಚಾಮರಾಜನಗರಕ್ಕೆ ಹೋಗುವ ಮಾರ್ಗ) ಡಾ. ಅಂಬೇಡ್ಕರ್ ಮತ್ತು ದೇವನೂರ ಮಹಾದೇವ ಅವರ ಹೆಸರಿಡುವ ಮೂಲಕ ಗೌರವ ಸಲ್ಲಿಸುವಂತೆ ನಂಜನಗೂಡಿನ ಪುರಸಭೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರಲ್ಲಿ ಮನವಿ.
ಎಸ್. ಸುಂದರ್ ಕಲಿವೀರ್, ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು
ಅಕ್ರಮ ಮದ್ಯ ಮಾರಾಟದ ಹಾವಳಿ ತಪ್ಪಿಸಿ
ಕೆ.ಆರ್. ನಗರ ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಹಾವಳಿ ಅತಿಯಾಗಿದ್ದು, ಇದರಿಂದ ಸಾರ್ವಜನಿಕರ ನೆಮ್ಮದಿ ಹಾಳಾಗಿದೆ. ಕಳೆದ 25 ವರ್ಷಗಳಿಂದ ಅಕ್ರಮ ಮದ್ಯ ಮಾರಾಟವಾಗುತ್ತಿರುವುದರಿಂದ ಪಕ್ಕದ ಗ್ರಾಮಗಳ ಕೆಲವರು ಗ್ರಾಮಕ್ಕೆ ಬಂದು ಕುಡಿದು ಗಲಾಟೆ ಮಾಡುವುದರಿಂದ, ಇವರನ್ನು ಯಾರೂ ಕೇಳುವವರೇ ಇಲ್ಲದಂತಾಗಿದೆ. ಕೂಡಲೆ ಸಂಬಂಧಿತ ಇಲಾಖೆಯ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಅಕ್ರಮ ಮದ್ಯ ಮಾರಾಟ ನಿಲ್ಲಿಸದಿದ್ದರೆ ಅಬ್ಕಾರಿ ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ.
ಕೆ.ಎಂ. ಮಂಜುನಾಥ್, ಗುತ್ತಿಗೆದಾರ
ವಸತಿ ಕೇಂದ್ರ ದುರಸ್ತಿಪಡಿಸಿ
ಹುಣಸೂರು ತಾಲೂಕಿನ ಹರವೆ ಗ್ರಾಮದಲ್ಲಿ ಈ ಹಿಂದೆ ನೂರಾರು ರೈತರಿಗೆ ಸೇವೆ ಒದಗಿಸುತ್ತಿದ್ದ ಗ್ರಾಮ ಸೇವಕರ ಕೇಂದ್ರ ಅನಾಥವಾಗಿದೆ. ಸರ್ಕಾರ ಪ್ರತಿ ಗ್ರಾಪಂಗೊಂದು ಗ್ರಾಮ ಸೇವಕರ ವಸತಿ ಗೃಹ ಕೇಂದ್ರ ತೆರೆದು ಸ್ಥಳೀಯವಾಗಿ ರೈತರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಅಧಿಕಾರಿಗಳು ನಿರ್ವಹಿಸುವಂತೆ ಮಾಡಿತ್ತು. ನಂತರ ಬಂದ ಸರ್ಕಾರ ಗ್ರಾಮ ಸೇವಕರ ಹುದ್ದೆ ವಜಾಗೊಳಿಸಿ ಹೋಬಳಿಗೊಂದು ರೈತ ಸಂಪರ್ಕ ಕೇಂದ್ರ ಮಂಜೂರು ಮಾಡಿತು. ಇದರಿಂದಾಗಿ ರೈತರ ಸಮಸ್ಯೆಗಳಿಗೂ ಸ್ಪಂದಿಸುವ ಕೆಲಸ ಇಂದಿಗೂ ಆಗಿಲ್ಲ. ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ. ಈಗ ಗ್ರಾಮ ಸೇವಕರ ಹುದ್ದೆಯೂ ಇಲ್ಲ. ಗ್ರಾಮ ಸೇವಕರ ವಸತಿ ಗೃಹವು ಅನಾಥವಾಗಿದೆ. ಈ ಬಗ್ಗೆ ಗ್ರಾಮಸ್ಥರು ಇಲಾಖೆಯ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಶಿವಣ್ಣ, ಗ್ರಾಮದ ಮುಖಂಡ ಮತ್ತು ಕೆ.ಎಂ. ನಾಗೇಶ್, ಶಿಕ್ಷಕ, ಹರವೆ, ಹುಣಸೂರು ತಾ.
ಮಡಿವಾಳ ಜನಾಂಗದ ಬಗ್ಗೆ ಗಮನ ಕೊಟ್ಟು ಅನುಕೂಲ ಮಾಡಿಕೊಡಿ
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಮಡಿವಾಳ ಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಡಿವಾಳರನ್ನು ಪ.ಜಾತಿಗೆ ಸೇರಿಸಲು ಚಿಂತಿಸುವುದಾಗಿ ಮತ್ತು ಡೋಬಿಘಾಟ್ಗಳನ್ನು ಅಭಿವೃದ್ಧಿ ಮತ್ತು ಪ್ರತಿ ಮಡಿವಾಳ ಮಕ್ಕಳಿಗೆ ವಿದ್ಯಾಸಿರಿ ಯೋಜನೆಯಲ್ಲಿ ತಿಂಗಳಿಗೆ 1,500 ಲಾಂಡ್ರಿ ನಡೆಸುವವರಿಗೆ 1.25 ಲಕ್ಷ ಸಬ್ಸಿಡಿ ಇನ್ನಿತರ ಯೋಜನೆಗಳನ್ನು ನೀಡುವುದಾಗಿ ಹೇಳಿದ್ದಾರೆ. ಅವರಿಗೆ ಧನ್ಯವಾದ. ಆದರೆ ಅಧಿಕಾರಿಗಳು ಡೋಬಿಘಾಟ್ಗಳಿಗೆ ಲಕ್ಷಾಂತರ ಮೊತ್ತದ ನೀರಿನ ಕಂದಾಯ ನೀಡುತ್ತಾರೆ. ಕೆಲವು ಬಾರಿ ನೀರನ್ನು ನಿಲ್ಲಿಸಿಬಿಡುತ್ತಾರೆ. ಆಗ ನಾವು ವರುಣ ನಾಲೆಯಲ್ಲಿ ಬಟ್ಟೆಗಳನ್ನು ಒಗೆಯಬೇಕು. ಹಿಂದೆ ನೀರಿನಲ್ಲಿ ನಮ್ಮ ಕಡೆಯವರೊಬ್ಬರು ಕೊಚ್ಚಿ ಹೋದರು. ಆದರೂ ಅಧಿಕಾರಿಗಳು ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅನ್ವಯ ಡೋಬಿಘಾಟ್ಗಳನ್ನು ನಾಗರಿಕ ಸೌಲಭ್ಯವೆಂದು ಪರಿಗಣಿಸಲು ಆದೇಶ ಆಗಿದೆ. ಉಚಿತ ನೀರು ಮತ್ತು ವಿದ್ಯುತ್ ಒದಗಿಸಬೇಕು. ಹೀಗಿದ್ದರೂ ಅಧಿಕಾರಿಗಳು ಸರ್ಕಾರದ ಆದೇಶವನ್ನೇ ಗಾಳಿಗೆ ತೂರಿ ನಮಗೆ ನೋಟಿಸ್ ಕಳುಹಿಸಿದ್ದಾರೆ. ಮಡಿವಾಳ ಜನಾಂಗಕ್ಕೆ ಅನ್ಯಾಯವಾಗುತ್ತಿದೆ. ಮಡಿವಾಳ ಜನಾಂಗದ ಬಗ್ಗೆ ಗಮನಿಸಬೇಕಾಗಿ ವಿನಂತಿ.
ಎನ್. ಜಗದೀಶ್ಕುಮಾರ್, ಮಡಿವಾಳ ಮಹಾಜನ ಸೇವಾ ಸಂಘ
ರಾಷ್ಟ್ರೀಯ ಹೆದ್ದಾರಿ ಮಾಡುವುದು ವಿವೇಚನಾರಹಿತ
ನಗರದ ಲಲಿತಮಹಲ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಎನ್ಎಚ್-212ರ ಭಾಗವನ್ನಾಗಿ ಮಾಡಲು ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಧರಿಸಿದೆ. ಕೇರಳದ ಕೋಳಿಕೋಡ್ನಿಂದ ಕರ್ನಾಟಕದ ಕೊಳ್ಳೇಗಾಲಕ್ಕೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯು 24 ಮೀ. ಅಗಲವಿದ್ದು ನಾಲ್ಕು ಪಥಗಳಿವೆ. ಮೈಸೂರಿಗೆ ಸಂಬಂಧಿಸಿದ ಹಾಗೆ, ಟಿ.ನರಸೀಪುರ ರಸ್ತೆ ಮತ್ತು ನಂಜನಗೂಡು ರಸ್ತೆಗಳು ಇದರ ಭಾಗವಾಗಿವೆ. ಎನ್ಎಚ್-212 ಹೆದ್ದಾರಿಯು ನಗರದ ಒಳಗೆ ಸುಮಾರು 5 ಕಿ.ಮೀ ಓಡುತ್ತದೆ. ಹೀಗೆ ರಾಷ್ಟ್ರೀಯ ಹೆದ್ದಾರಿಯನ್ನು ನಗರದೊಳಗೆ ತರುವುದು ವಿವೇಚನಾರಹಿತವಾದ ಹೆಜ್ಜೆ.
ಮೇ.ಜ. ಎಸ್.ಜಿ. ಒಂಬತ್ಕೆರೆ, ಮೈಸೂರು ಗ್ರಾಹಕರ ಪರಿಷತ್.
ಅತಿಯಾದ ವೇಗಕ್ಕೆ ಕಡಿವಾಣ ಹಾಕಿ
ಖಾಸಗಿ ಬಸ್ಗಳ ಚಾಲಕರು ತಿರುವುಗಳಲ್ಲಿ, ಹೆಚ್ಚು ಸಂಚಾರವಿರುವ ಪ್ರದೇಶಗಳಲ್ಲಿ ತಮ್ಮ ನಿರ್ಲಕ್ಷ್ಯತನದಿಂದಾಗಿ ಅಪಘತಾಗಳು ಸಂಭವಿಸಿ ಅಮಾಯಕ ಜನರ ಸಾವು ನೋವುಗಳ ಪ್ರಕರಣಗಳು ಸಂಭವಿಸುತ್ತಿವೆ. ಆದರೂ ಈ ಚಾಲಕರು ಎಚ್ಚೆತ್ತುಕೊಂಡಿಲ್ಲ. ಪ್ರಮುಖವಾಗಿ ಶಾಲಾ ಕಾಲೇಜು ಮತ್ತು ಆಸ್ಪತ್ರೆ ದೇವಸ್ಥಾನ ಮುಂತಾದ ನಿಶ್ಯಬ್ದ ವಲಯದಲ್ಲೂ ಕರ್ಕಶ ಶಬ್ದ ಮಾಡುತ್ತಾರೆ. ಇದರಿಂದ ಪಾದಚಾರಿಗಳು ಭಯಭೀತರಾಗುವಂತೆ ಮಾಡುತ್ತಾರೆ. ಬಸ್ಗಳಲ್ಲಿ ನಿಗದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ರಸ್ತೆಗಳಲ್ಲಿ ಪೈಪೋಟಿಗೆ ಇಳಿಯುತ್ತಾರೆ. ಇದರಿಂದ ಹೆಚ್ಚು ಅಪಘಾತಗಳು ಸಂಭವಿಸಿವೆ. ಹೀಗಾಗಿ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಅವರು ನಗರದಲ್ಲಿ ಸಂಚಾರಕ್ಕೆ ಪ್ರಮುಖ ಆದ್ಯತೆ ನೀಡಿದ್ದು, ಖಾಸಗಿ ಬಸ್ಗಳ ಚಾಲಕರು ಅತಿ ವೇಗಕ್ಕೆ ಕಡಿವಾಣ ಹಾಕಿ, ನಿರ್ದಾಕ್ಷಿಣ ಕ್ರಮ ಕೈಗೊಳ್ಳಬೇಕು.
ಬಿ. ಪ್ರಸಾದ್, ಉಪಾಧ್ಯಕ್ಷರು, ಪ. ಜಾತಿ ವಿಭಾ, ನಗರ ಕಾಂಗ್ರೆಸ್ ಸಮಿತಿ