ಲೆಟ್ಸ್ ಡು ಇಟ್ನಿಂದ ಸ್ವಚ್ಛತಾ ಕಾರ್ಯ
ಕ.ಪ್ರ.ವಾರ್ತೆ ಮೈಸೂರು ಜ. 26
ಲೆಟ್ಸ್ ಡು ಇಟ್ ಮೈಸೂರು ಸಂಸ್ಥೆಯ ಪದಾಧಿಕಾರಿಗಳು ಭಾನುವಾರ ಚಾಮುಂಡಿಬೆಟ್ಟದ ಮೆಟ್ಟಿಲುಗಳ ಸ್ವಚ್ಛತೆ ಮತ್ತು ಮಂಟಪಗಳ ಸ್ವಚ್ಛತಾ ಕಾರ್ಯ ನಡೆಸಿದರು.
ಲೆಟ್ಸ್ ಡು ಇಟ್ ಸಂಸ್ಥೆಯ ಸುಮಾರು 500ಕ್ಕೂ ಹೆಚ್ಚು ಸದಸ್ಯರು ಈ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. ಚಾಮುಂಡಿಬೆಟ್ಟದ ಪಾದದ ಬಳಿಯ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಆರಂಭವಾದ ಸ್ವಚ್ಛತಾ ಕಾರ್ಯವು ಚಾಮುಂಡಿ ಬೆಟ್ಟದ ಮೇಲಿನ ದೇವಸ್ಥಾನದ ಆವರಣದಲ್ಲಿ ಅಂತ್ಯಗೊಂಡಿತು.
ಪಾದದ ಬಳಿಯಲ್ಲಿನ ಹಳೆಯ ಕಲ್ಲು ಮಂಟಪಗಳಲ್ಲಿ ಬರೆಯಲಾಗಿದ್ದ ಕೆಟ್ಟ ಬರವಣಿಗೆಗಳು ಮತ್ತು ಪ್ರೇಮಿಗಳ ಹೆಸರುಗಳ ಮೇಲೆ ಸುಣ್ಣ ಬಳಿಯಲಾಯಿತು. ಆ ಮೂಲಕ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಯಿತು. ಮೆಟ್ಟಿಲುಗಳ ಮೇಲೆ ಬೀಸಾಡಿದ್ದ ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ಬಾಟಲ್ಗಳು ಮತ್ತು ಗಿಡಗಳ ಪೊದೆಯಲ್ಲಿ ಸೇರಿದ್ದ ಪ್ಲಾಸ್ಟಿಕ್ ಚೀಲಗಳನ್ನು ತೆಗೆದರು.
ಈ ಸ್ವಚ್ಛತಾ ಕಾರ್ಯಕ್ಕೆ ಶಾಸಕ ಎಂ.ಕೆ. ಸೋಮಶೇಖರ್ ಚಾಲನೆ ನೀಡಿದರು. ಪಾಲಿಕೆ ಸದಸ್ಯ ಸ್ನೇಕ್ಶ್ಯಾಂ ಭಾಗವಹಿಸಿದ್ದರು. ಸುಮಾರು 200ಕ್ಕೂ ಹೆಚ್ಚು ಮೂಟೆ ಕಸ ಸಂಗ್ರಹವಾಗಿದ್ದು, ಪಾಲಿಕೆ ವಾಹನದ ಮೂಲಕ ವಿಲೇವಾರಿಗೊಳಿಸಿದರು. ಲೆಟ್ಸ್ ಡು ಇಟ್ ಸಂಸ್ಥೆಯ ಬಿ.ಎಸ್. ಪ್ರಶಾಂತ್, ಶಿವಶಂಕರ್, ಸುಧೀಂದ್ರ, ಕಿರಣ್, ಸಂಜಯ್, ರೇವಣ್ಣ ಇದ್ದರು.