ಸಮಾನತೆ, ಸಹಬಾಳ್ವೆ ಪ್ರಜಾಪ್ರಭುತ್ವದ ಆಶಯ: ಶಾಸಕ ಸೋಮಶೇಖರ್
ಮೈಸೂರು: ಎಲ್ಲರಿಗೂ ಸಮಾನತೆ, ಶಾಂತಿ ಹಾಗೂ ಸಹಬಾಳ್ವೆ ನೀಡುವುದೇ ಪ್ರಜಾಪ್ರಭುತ್ವದ ಆಶಯ ಎಂದು ಕೃಷ್ಣರಾಜ ಶಾಸಕ ಎಂ.ಕೆ. ಸೋಮಶೇಖರ್ ಹೇಳಿದರು.
ಶಾರದಾ ವಿಲಾಸ ವಿದ್ಯಾಸಂಸ್ಥೆಯು ಕಾಲೇಜು ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ 65ನೇ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ದೇಶದಲ್ಲಿ ಜನಸಂಖ್ಯೆ, ಜಾತೀಯತೆ ಹಾಗೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ವಿದ್ಯಾರ್ಥಿ ವೃಂದ ದೇಶ ಸೇವೆಯಲ್ಲಿ ಭಾಗವಹಿಸಬೇಕು. ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವನಶೈಲಿ ಇಂದಿನ ಯುವಜನತೆಗೆ ಮಾರ್ಗದರ್ಶನ ಎಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸ್ವಾತಂತ್ರ್ಯ ತಂದುಕೊಡುವಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಿಸಿ ಎಂದರು. ಈ ಸಂದರ್ಭದಲ್ಲಿ ಶಾಸಕ ಎಂ.ಕೆ. ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಸಂಸ್ಥೆಗೆ ಕೀರ್ತಿ ತಂದಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ರವಿಶಂಕರ್, ಸದಸ್ಯರಾದ ಆರ್.ನರಸಿಂಹ, ಎಸ್. ನಾಗರಾಜ್, ಎಚ್.ಕೆ. ಶ್ರೀನಾಥ್, ಮೋಹನಮೂರ್ತಿ, ಹರೀಶ್. ನಾಗರಾಜ್, ಎಸ್.ಎಲ್. ರಾಮಚಂದ್ರ ಇದ್ದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎ.ಆರ್. ನಾಗಭೂಷಣ್ ಸ್ವಾಗತಿಸಿದರು.