ಸೋಲು- ಗೆಲುವಿಗಿಂತ ಕ್ರೀಡಾ ಮನೋಭಾವ ಮುಖ್ಯ
ಮೈಸೂರು: ಕ್ರೀಡೆಯಲ್ಲಿ ಸೋಲು- ಗೆಲವು ಮುಖ್ಯವಲ್ಲ. ಯಾವುದೇ ಆಟವನ್ನು ಕ್ರೀಡಾಪಟುಗಳು ಕ್ರೀಡಾಮನೋಭಾವದಿಂದ ತೆಗೆದುಕೊಂಡು ಆಡಬೇಕು ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಪ್ರೊ.ಟಿ.ಜೆ. ರಾಮಮೂರ್ತಿ ಹೇಳಿದರು.
ವಿಜಯನಗರ 1ನೇ ಹಂತದಲ್ಲಿರುವ ಎಂಡಿಎ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಲಯನ್ಸ್ ರೀಜನ್ 7 ಕಪ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಲಯನ್ಸ್ ಸಂಸ್ಥೆಗಳು ಸೇವಾ ಕಾರ್ಯ ಮಾಡುವುದಷ್ಟೇ ಅಲ್ಲದೆ, ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಒಟ್ಟುಗೂಡಿ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಿರುವುದು ಉತ್ತಮ ಬೆಳವಣಿಗೆ ಎಂದರು.
ಪ್ರಾಂತೀಯ ಅಧ್ಯಕ್ಷ ವಿ.ನಾಗರಾಜ್ ಬೈರಿ ಮಾತನಾಡಿ, ಕ್ರಿಕೆಟ್ ಪಂದ್ಯಾವಳಿ 2 ದಿನ ನಡೆಯಲಿದ್ದು, ಒಟ್ಟು 6 ತಂಡಗಳು ಭಾಗವಹಿಸಲಿವೆ. ಪ್ರಥಮ ಬಹುಮಾನ 10 ಸಾವಿರ, ದ್ವಿತೀಯ 5 ಸಾವಿರ, ಪಂದ್ಯ ಪುರುಷೋತ್ತಮ 1 ಸಾವಿರ ನೀಡಲಾಗುವುದು. ಫೆ.9 ರಂದು ಸೆನೆಟ್ ಭವನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು. ಮಾಜಿ ರಾಜ್ಯಪಾಲ ಎಂ.ಎನ್. ಜಯಪ್ರಕಾಶ್, ಡಾ.ಪ್ರಭಾಮಂಡಲ್, ಎನ್. ಸುಬ್ರಹ್ಮಣ್ಯ, ಪಿ. ರಮೇಶ್, ಡಾ. ನಿರ್ಮಲ, ಕಾರಿಯಪ್ಪ, ಧರ್ಮರಾಜು, ನಾಗರತ್ನ, ಮಹದೇವು, ಹೊನ್ನಪ್ಪ, ಉದಯ್ ಇದ್ದರು. ವಿ. ವೆಂಕಟೇಶ್ ಸ್ವಾಗತಿಸಿದರು. ರಮೇಶ್ ವಂದಿಸಿದರು.