ಸ್ಲಂ ಮೋರ್ಚಾದಿಂದ ಸ್ವಚ್ಛತಾ ಅಭಿಯಾನ
ಮೈಸೂರು: ಬಿಜೆಪಿ ಸ್ಲಂ ಮೋರ್ಚಾ ಕಾರ್ಯಕರ್ತರು ಭಾನುವಾರ ವಾರ್ಡ್ ನಂ.37ರ ವೈದ್ಯಕೀಯ ಮಹಿಳಾ ವಿದ್ಯಾರ್ಥಿ ನಿಲಯದ ಹಿಂಭಾಗದ ಸ್ಲಂನಲ್ಲಿ ಸ್ವಚ್ಛತಾ ಅಭಿಯಾನ ಏರ್ಪಡಿಸಿದ್ದರು. ರಾಜ್ಯ ಸ್ಲಂ ಮೋರ್ಚಾ ಅಧ್ಯಕ್ಷ ಎಲ್. ನಾಗೇಂದ್ರ ಈ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಸ್ಲಂನ ರಸ್ತೆಗಳು ಮತ್ತು ಚರಂಡಿಯನ್ನು ಸ್ವಚ್ಛಗೊಳಿಸಿದರು. ಮೋರ್ಚಾದ ಸುಮಾರು ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರ ಜೊತೆ ಸ್ಥಳೀಯ ನಿವಾಸಿಗಳು ಈ ಅಭಿಯಾನದಲ್ಲಿ ಭಾಗವಹಿಸಿದ್ದರು. ನಂತರ ವಾರ್ಡ್ ನಂ.29ರ ಮೇಟಗಳ್ಳಿ ಬಡಾವಣೆಯ ಅಂಬೇಡ್ಕರ್ ಕಾಲೋನಿಯಲ್ಲಿ ಸ್ವಾಮಿ ವಿವೇಕಾನಂದರ 151ನೇ ಜಯಂತಿ ಮಹೋತ್ಸವ ಅಂಗವಾಗಿ ನಗರ ಸ್ಲಂ ಮೋರ್ಚಾ ಮತ್ತು ಚಾಮರಾಜ ಕ್ಷೇತ್ರ ಸ್ಲಂ ಮೋರ್ಚಾ ವತಿಯಿಂದ ನೇತ್ರದಾನಿಗಳ ನೋಂದಣಿ, ರಕ್ತದಾನ ಶಿಬಿರ ಹಾಗೂ ವೈದ್ಯಕೀಯ ತಪಾಸಣೆ ಆಯೋಜಿಸಲಾಗಿತ್ತು. ನಗರ ಸ್ಲಂ ಮೋರ್ಚಾ ಅಧ್ಯಕ್ಷ ಎನ್. ರಾಜು, ಮುಖಂಡರಾದ ಪುಟ್ಟರಾಜು, ಸಿಂಧ್ಯಾ ಇದ್ದರು.