ಹಾಸ್ಟೆಲ್ ಅವ್ಯವಸ್ಥೆಯನ್ನು ಖಂಡಿಸಿ ಪ್ರತಿಭಟನೆ
ಪಿರಿಯಾಪಟ್ಟಣ: ಪಟ್ಟಣದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದ ವಿವಿಧ ಸಂಘಟನೆಯ ಕಾರ್ಯಕರ್ತರು ನಿಲಯದ ಅವ್ಯವಸ್ಥೆ ಖಂಡಿಸಿ ಪ್ರತಿಭಟಿಸಿದರು.
ಪಟ್ಟಣದ ಬಿ.ಎಂ. ರಸ್ತೆಯಲ್ಲಿರುವ ವಿದ್ಯಾರ್ಥಿ ನಿಲಯದಲ್ಲಿನ ಅವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳಿಂದ ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಭೇಟಿ ನೀಡಿ ಪರಿಶೀಲಿಸಿದರು. ಪರಿಶೀಲನೆ ವೇಳೆ ನಿಲಯದ ಮೇಲ್ವಿಚಾರಕರಾಗಲಿ ಅಥವಾ ಮಕ್ಕಳನ್ನು ರಾತ್ರಿ ವೇಳೆಯಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲದ ಕಾರಣ, ಕೆಲಕಾಲ ಪ್ರತಿಭಟನೆ ನಡೆಸಿ ಮೇಲ್ವಿಚಾರಕ ಶಿವಕುಮಾರ್ ಅವರನ್ನು ಅಮಾನತುಪಡಿಸುವಂತೆ ಆಗ್ರಹಿಸಿ ಪ್ರತಿಭಟಿಸಿದರು.
ಕರವೇ ತಾ. ಅಧ್ಯಕ್ಷ ಎನ್.ಎಲ್. ಗೀರೀಶ್, ನಾಗರಿಕ ಹಿತರಕ್ಷಣಾ ಸಮಿತಿ ತಾ. ಅಧ್ಯಕ್ಷ ಮಂಜು, ದಸಂಸ ಮುಖಂಡ ಅಣ್ಣಯ್ಯ, ಗೋಪಾಲ್, ಮಹಮ್ಮದ್ ಷರೀಫ್, ಫಯಾಜ್, ರವಿ ಇದ್ದರು.
ಪ್ರತಿಭಟನೆಯ ಬಗ್ಗೆ ಮಾಹಿತಿ ತಿಳಿದ ತಾಪಂ ಇಒ ಮಹದೇವಸ್ವಾಮಿ ಹಾಗೂ ಸಮಾಜ ಕಲ್ಯಾಣಾಧಿಕಾರಿ ಕೆ.ಟಿ. ನಾರಾಯಣ್ ಶನಿವಾರ ಬೆಳಿಗ್ಗೆ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಕಲೆ ಹಾಕಿದರು. ಇಒ ಮಹದೇವಸ್ವಾಮಿ ಮಾತನಾಡಿ, ಈ ಬಗ್ಗೆ ಸಮಾಜ ಕಲ್ಯಾಣಾಧಿಕಾರಿಗೆ ನೋಟಿಸ್ ನೀಡಲಾಗುವುದು, ಅವರಿಂದ ಬಂದ ಉತ್ತರವನ್ನು ಹಾಗೂ ವರದಿಯನ್ನು ಜಿಪಂ ಸಿಇಒ ಅವರ ಗಮನಕ್ಕೆ ತಂದು ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.