ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷರ ಬಿಸಿ
ಕ.ಪ್ರ.ವಾರ್ತೆ ರಾವಂದೂರು ಜ. 27
ಪಟ್ಟಣದ ಜಿಪಂ ಮತ್ತು ಬಿಇಒ ಕಚೇರಿಗಳಿಗೆ ಜಿಪಂ ಅಧ್ಯಕ್ಷ ಎಂ.ಮಹದೇವ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲೆಯಲ್ಲಿ ಎಲ್ಲ ಕಡೆ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬೇಸಿಗೆ ಎದುರಾಗುತ್ತಿದ್ದು, ಹಲವು ಕಡೆ ಕುಡಿಯುವ ನೀರಿನ ಕಾಮಗಾರಿ ಸಂಪೂರ್ಣಗೊಂಡಿಲ್ಲ. ಅಲ್ಲದೆ ಅನೇಕ ಕಡೆ ಕಳಪೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ದೂರು ಬಂದಿದ್ದು, ಇದನ್ನು ಆದರಿಸಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಕಗ್ಗುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಟ್ಯಾಂಕ್ ಮತ್ತು ಪೈಪ್ಲೈನ್ ಕಾಮಗಾರಿ ಪರಿಶೀಲನೆ ವೇಳೆ ಎಂಜಿನಿಯರ್ ಪಾಷ ಪೈಪ್ಲೈನ್ ನಡೆದಿರುವ ಬಗ್ಗೆ ಸೂಕ್ತ ಮಾಹಿತಿ ನೀಡದೆ ಹಿಂದೇಟು ಹಾಕಿದರು. ನಂತರ ಕಚೇರಿಯಲ್ಲಿ ಫೋಟೋಗಳಿರುವುದಾಗಿ ಹೇಳಿದರು. ಅಧ್ಯಕ್ಷರು ಮತ್ತೆ ಕಚೇರಿಗೆ ಭೇಟಿ ನೀಡಿದಾಗ ಇತರೆ ಗ್ರಾಮದ ಕಾಮಗಾರಿಗಳ ಫೋಟೋ ನೀಡಲು ಮುಂದಾದಾಗ ಇವುಗಳನ್ನು ವಶಪಡಿಸಿಕೊಂಡು ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಜಿಪಂ ಎಂಜಿನಿಯರಿಂಗ್ ವಿಭಾಗದ ಕಚೇರಿಗೆ ಅಧ್ಯಕ್ಷರು ಭೇಟಿ ನೀಡಿದ ವೇಳೆ ಇಡೀ ಕಚೇರಿ ಖಾಲಿ ಇತ್ತು.
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಕಚೇರಿಯಲ್ಲಿ ಯಾರು ಇಲ್ಲದೆ ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿರುವ ಬಗ್ಗೆ ವಿಚಾರಣೆ ನಡೆಸಿದರು.
ನಂತರ ಬಿಇಒ ಕಚೇರಿಗೆ ಭೇಟಿ ನೀಡಿದ ಅಧ್ಯಕ್ಷರು, ಅರೇನಹಳ್ಳಿ ಗ್ರಾಮದ ಶಾಲಾ ಮುಖ್ಯಶಿಕ್ಷಕ ಶಿವಕುಮಾರ್ ಅವರ ಸೇವಾ ಪುಸ್ತಕ ಕಳೆದು ಹಾಕಿರುವ ಬಗ್ಗೆ ವಿಚಾರಣೆ ಸಿಬ್ಬಂದಿ ಕಾರ್ಯವೈಖರಿಯ ಬಗ್ಗೆ ತರಾಟೆ ತೆಗೆದುಕೊಂಡರು. ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸದಿದ್ದರೆ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.