ಕಾಯಂಗೆ ಆಗ್ರಹಿಸಿ ನೌಕರರ ಆತ್ಮಹತ್ಯೆ ಬೆದರಿಕೆ
ಮೈಸೂರು: ಫಾಲ್ಕನ್ ಟೈರ್ಸ್ನ ಬದಲಿ ನೌಕರರನ್ನು ಕಾಯಂಗೊಳಿಸಲು ಆಗ್ರಹಿಸಿ ಇಬ್ಬರು ಕಾರ್ಮಿಕರು ಕಾರ್ಖಾನೆ ಚಿಮಣಿ ಏರಿ ಆತ್ಮಹತ್ಯೆ ಬೆದರಿಕೆಯೊಡ್ಡುವ ಮೂಲಕ ಆತಂಕ ಸೃಷ್ಟಿಸಿದ ಘಟನೆ ಸೋಮವಾರ ನಡೆಯಿತು.
ನಗರದ ಕೆಆರ್ಎಸ್ ರಸ್ತೆ ಮೇಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಫಾಲ್ಕನ್ ಟೈರ್ಸ್ ಕಾರ್ಖಾನೆಯ ಬದಲಿ ನೌಕರರಾದ ನದೀಂ ಅಹಮ್ಮದ್ ಮತ್ತು ರಾಜಶೇಖರ ಚಕ್ರಪಾಣಿ ಎಂಬವರೆ ಆತ್ಮಹತ್ಯೆ ಬೆದರಿಕೆಯೊಡ್ಡಿದವರು.
ಕಾರ್ಮಿಕ ಇಲಾಖೆ ಹಾಗೂ ಫಾಲ್ಕನ್ ಟೈರ್ಸ್ನ ಆಡಳಿತ ಮಂಡಳಿ ನೀಡಿದ ಭರವಸೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಚಿಮಣಿ ಏರಿ ಕುಳಿತಿದ್ದ ನದೀಂ ಅಹಮ್ಮದ್ ಮತ್ತು ರಾಜಶೇಖರ ಚಕ್ರಪಾಣಿ ಅವರ ಆತ್ಮಹತ್ಯೆ ಪ್ರಹಸನ ಅಂತ್ಯಗೊಂಡಿತು.
ಆತಂಕ ಸೃಷ್ಟಿ: ಫಾಲ್ಕನ್ ಟೈರ್ಸ್ ಕಾರ್ಖಾನೆಯಲ್ಲಿ 183 ಮಂದಿ ಬದಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬದಲಿ ನೌಕರರನ್ನು ಕಾಯಂಗೊಳಿಸುವಂತೆ ಕಳೆದ 4 ವರ್ಷದಿಂದ ಹೋರಾಟ ನಡೆಯುತ್ತಿದೆ. ಇದಕ್ಕೆ ಆಡಳಿತ ಮಂಡಳಿ ಸ್ಪಂದಿಸದ ಹಿನ್ನೆಲೆಯಲ್ಲಿ ಕಾರ್ಮಿಕರು ನ್ಯಾಯಾಲಯದ ಮೊರೆ ಹೋಗಿದ್ದರು.
ಇಷ್ಟೆಲ್ಲವಾದರೂ ಸಹ ಆಡಳಿತ ಮಂಡಳಿಯವರು ಬದಲಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಇದರಿಂದ ಮನನೊಂದ ನದೀಂ ಅಹಮ್ಮದ್ ಮತ್ತು ರಾಜಶೇಖರ ಚಕ್ರಪಾಣಿ ಅವರು ಕಾರ್ಖಾನೆಯ ಚಿಮಣಿ ಏರಿ ಪ್ರತಿಭಟಿಸಿದರು. 183 ಕಾರ್ಮಿಕರನ್ನು ಕಾಯಂ ಮಾಡದಿದ್ದರೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದರು.
ಈ ವಿಚಾರ ತಿಳಿಯುತ್ತಿದ್ದಂತೆ ಸಾರ್ವಜನಿಕರು, ಕಾರ್ಮಿಕರು, ನದೀಂ ಮತ್ತು ರಾಜಶೇಖರ ಕುಟುಂಬದವರು ಸ್ಥಳದಲ್ಲಿ ಜಮಾಯಿಸಿದ್ದರು. ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕಾರ್ಮಿಕ ಅಧಿಕಾರಿ ಆಗಮನ: ಈ ವಿಚಾರ ತಿಳಿಯುತ್ತಿದ್ದಂತೆ ಸಹಾಯಕ ಕಾರ್ಮಿಕ ಅಧಿಕಾರಿ ವೆಂಕಟೇಶ್ ಸಿಂದಿಹಟ್ಟಿ ಅವರು ಸ್ಥಳಕ್ಕೆ ಆಗಮಿಸಿ, ಕಾರ್ಖಾನೆ ವ್ಯವಸ್ಥಾಪಕ ಶಶಿಧರ್, ಮಾನವ ಸಂಪನ್ಮೂಲ ವ್ಯವಸ್ಥಾಪಕ ಇಮ್ಯಾನುವೆಲ್ ಸುರೇಶ್ ಹಾಗೂ ಕಾರ್ಮಿಕ ಸಂಘದ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಜ.30 ರಂದು ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಸಂಘದ ಪದಾಧಿಕಾರಿಗಳ ಸಭೆ ನಡೆಸಿ ಕಾರ್ಮಿಕರ ಬೇಡಿಕೆಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು. ವೇತನ ಹೆಚ್ಚಳ ಸೇರಿದಂತೆ ಇನ್ನಿತರ ಬೇಡಿಕೆಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಚಿಮಣಿ ಹತ್ತಿದ್ದ ನದೀಂ ಅಹಮ್ಮದ್ ಮತ್ತು ರಾಜಶೇಖರ ಚಕ್ರಪಾಣಿ ಕೆಳಗಿಳಿದರು.