ಕೊನೆತನಕ ಜೆಡಿಎಸ್ಗೆ ನಿಷ್ಠರಾಗಿದ್ದ ನಂಜಪ್ಪ
ಅಂಶಿ ಪ್ರಸನ್ನಕುಮಾರ್
ಮೈಸೂರು: ಮಲೆನಾಡು ಗಾಂಧಿ ಎಚ್.ಜಿ. ಗೋವಿಂದೇಗೌಡ, ಮಂಡ್ಯ ಗಾಂಧಿ ಕೆ.ಆರ್. ಪೇಟೆ ಕೃಷ್ಣ ಅವರಂತೆ ಸರಳ, ಸಜ್ಜನಿಕೆಯ ಸಾಕಾರಮೂರ್ತಿಯಂತಿದ್ದ ಮೈಸೂರು ಭಾಗದ ಹಿರಿಯ ರಾಜಕಾರಣಿ, ಮಾಜಿ ಸಚಿವ ಎಸ್. ನಂಜಪ್ಪ ಅವರ ನಿಧನೊಂದಿಗೆ ಪಕ್ಷ ಹಾಗೂ ನಾಯಕತ್ವಕ್ಕೆ ನಿಷ್ಠರಾಗಿದ್ದ ವ್ಯಕ್ತಿಯೊಬ್ಬರು ಕಣ್ಮರೆಯಾದಂತೆ ಆಗಿದೆ.
ಹೆಚ್ಚು ಕಡಿಮೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಎಸ್. ನಂಜಪ್ಪ ಅವರು ಸಮಕಾಲೀನರು. ನಿಖರವಾಗಿ ಹೇಳಬೇಕೆಂದರೆ ನಂಜಪ್ಪ ಅವರೇ ನಾಲ್ಕು ತಿಂಗಳು ದೊಡ್ಡವರು. ಹೀಗಾಗಿ ದೇವೇಗೌಡರು ಅವರನ್ನು ಸದಾ ನಂಜಪ್ಪಣ್ಣ ಎಂದೇ ಕರೆಯುತ್ತಿದ್ದರು. ದೇವೇಗೌಡರ ನಾಯಕತ್ವ ಹಾಗೂ ಪಕ್ಷಕ್ಕೆ ಇವರು ನಿಷ್ಠರಾಗಿದ್ದರು. ಎಷ್ಟರ ಮಟ್ಟಿಗೆ ಎಂದರೆ ಅನಾರೋಗ್ಯ ನಿಮಿತ್ತ 1999ರಲ್ಲಿ ಅವರು ಸ್ಪರ್ಧಿಸಲಾಗಲಿಲ್ಲ. ಆಗ ಟಿಕೆಟ್ ಅವರ ಪುತ್ರ ಕೆ.ಎನ್. ಬಸಂತ್ ಬದಲು ಮಂಚನಹಳ್ಳಿ ಮಹದೇವ್ ಅವರ ಪಾಲಾಯಿತು. 2004 ರಲ್ಲೂ ಮಹದೇವ್ಗೆ ಟಿಕೆಟ್. 1999ರಲ್ಲಿ ಸೋತಿದ್ದ ಮಹದೇವ್ 2004ರಲ್ಲಿ ಗೆದ್ದರು. 2008ರ ವೇಳೆಗೆ ಮಹದೇವ್ ಅವರು ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ, ಕಾಂಗ್ರೆಸ್ಗೆ ಹೋಗಿದ್ದರಿಂದ ಪಕ್ಷದ ಟಿಕೆಟ್, ಬಿಜೆಪಿಯಿಂದ ಬಂದಿದ್ದ ಸಾ.ರಾ. ಮಹೇಶ್ ಪಾಲಾಯಿತು. ಗೆದ್ದರು. ಆದರೂ ನಂಜಪ್ಪ ಅವರು ಪಕ್ಷ ಹಾಗೂ ನಾಯಕತ್ವ ನಿಷ್ಠೆ ಕಡಿಮೆಯಾಗಿರಲಿಲ್ಲ.
ಕಣ್ಣೀರು ಹಾಕಿದ್ದರು: ಯಾವುದೋ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ದೇವೇಗೌಡರ ವಿರುದ್ಧ ಪ್ರತಿಭಟನೆ ನಡೆದು, ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ, ದಹಿಸಿದ್ದನ್ನು ಟಿವಿಯಲ್ಲಿ ನೋಡಿದ್ದ ನಂಜಪ್ಪ, ತಮ್ಮ ನಾಯಕನಿಗೆ ಈ ರೀತಿ ಆಯಿತಲ್ಲ ಎಂದು ಕಣ್ಣೀರು ಹಾಕಿದ್ದರು.
ಮೂಲತಃ ಕೆ.ಆರ್. ನಗರ ತಾಲೂಕು ಕನುಗನಹಳ್ಳಿಯವರಾದ ನಂಜಪ್ಪ, ಪದವಿ ನಂತರ, ಕಾನೂನು ವ್ಯಾಸಂಗ ಮಾಡಿ, ವಕೀಲರಾಗಿದ್ದರು. ಇವರ ಹಿರಿಯ ಸೋದರ ಕೆ.ಎಸ್. ಗೌಡಯ್ಯ ಕೂಡ ಕೆ.ಆರ್. ನಗರ ಕ್ಷೇತ್ರದಿಂದ 1962 ರಲ್ಲಿ ಶಾಸಕರಾಗಿದ್ದವರು. ಅವರು ಮೂರು ಬಾರಿ ಸೋತಿದ್ದರು. ಅಣ್ಣನ ಹಾದಿಯಲ್ಲಿ ಸಾಗಿದ ನಂಜಪ್ಪ ಅವರು ಕೂಡ ರಾಜಕಾರಣ ಪ್ರವೇಶಿಸಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾದರು.
ಕೆ.ಆರ್. ನಗರ ವಿಧಾನಸಭಾ ಕ್ಷೇತ್ರ ಕಳೆದ ಮೂರುವರೆ ದಶಕಗಳಿಂದಲೂ ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರುವಾಸಿ. ಇದುವರೆಗೆ ಕಾಂಗ್ರೆಸ್ ಹಾಗೂ ಜನತಾ ಪರಿವಾರದ ನಡುವೆಯೇ ಸಾಂಪ್ರದಾಯಿಕ ಹೋರಾಟ ನಡೆದಿದೆ. ಜೆಡಿಎಸ್ ವರಿಷ್ಠ ದೇವೇಗೌಡರು ಸುದೀರ್ಘ ಕಾಲ ಪ್ರತಿನಿಧಿಸಿದ್ದ, ಈಗ ಅವರ ಪುತ್ರ ಎಚ್.ಡಿ. ರೇವಣ್ಣ ಪ್ರತಿನಿಧಿಸುತ್ತಿರುವ ಹೊಳೆನರಸೀಪುರ ಕ್ಷೇತ್ರ ಇದಕ್ಕೆ ಹೊಂದಿಕೊಂಡಂತಿರುವುದು ಈ ಮಟ್ಟದ ಪೈಪೋಟಿಗೆ ಕಾರಣ.
ಸಾಂಪ್ರದಾಯಿಕ ಎದುರಾಳಿಗಳು: 1978ಕ್ಕೆ ಮೊದಲು ಕೆ.ಆರ್. ನಗರ ಕ್ಷೇತ್ರದಿಂದ ಒಕ್ಕಲಿಗರು, ಲಿಂಗಾಯಿತರು, ಕುರುಬರು ಗೆದ್ದಿದ್ದಾರೆ. ಆದರೆ 1978 ರಿಂದ ತಾಲೂಕಿನಲ್ಲಿ ಬಹುಸಂಖ್ಯಾತರಾದ ಒಕ್ಕಲಿಗರು ಹಾಗೂ ಕುರುಬರ ನಡುವೆಯೇ ಪೈಪೋಟಿ. 1978 ರಿಂದ 1994 ರವರೆಗೆ ಕಾಂಗ್ರೆಸ್ನಿಂದ ಎಚ್. ವಿಶ್ವನಾಥ್ ಹಾಗೂ ಜನತಾ ಪರಿವಾರದಿಂದ ಎಸ್. ನಂಜಪ್ಪ ಸಾಂಪ್ರದಾಯಿಕ ಎದುರಾಳಿಗಳಾಗುತ್ತಿದ್ದುದು ಇದಕ್ಕೆ ಕಾರಣ.
1978 ರಲ್ಲಿ ಕಾಂಗ್ರೆಸ್ನ ಎಚ್.ವಿಶ್ವನಾಥ್ ಜನತಾಪಕ್ಷದ ಎಸ್. ನಂಜಪ್ಪ ಅವರನ್ನು ಸೋಲಿಸಿದರೆ, 1983 ಹಾಗೂ 1985 ರಲ್ಲಿ ಫಲಿತಾಂಶ ಉಲ್ಟಾಪಲ್ಟಾ. ಎರಡೂ ಬಾರಿ ನಂಜಪ್ಪ ಗೆಲವು ಸಾಧಿಸಿದ್ದರು. ಅಲ್ಲಿಯವರೆಗೆ ಕೆ.ಆರ್. ನಗರದಲ್ಲಿ ಸತತ ಎರಡು ಬಾರಿ ಯಾರೂ ಗೆದ್ದಿಲ್ಲ ಎಂಬುದನ್ನು ಅಳಿಸಿದರು.
1989ರ ವೇಳೆಗೆ ಜನತಾಪಕ್ಷ ಇಬ್ಭಾಗವಾಗಿತ್ತು. ನಂಜಪ್ಪ ಅವರು ತಮ್ಮ ನಿಷ್ಠೆ ಬದಲಿಸಲಿಲ್ಲ. ಬದಲಿಗೆ ದೇವೇಗೌಡರ ಜೊತೆಯಲ್ಲಿಯೇ ಉಳಿದು, ಸಮಾಜವಾದಿ ಜನತಾಪಕ್ಷದ ಅಭ್ಯರ್ಥಿಯಾದರು. ಎಂದಿನಂತೆ ವಿಶ್ವನಾಥ್ ಕಾಂಗ್ರೆಸ್ ಅಭ್ಯರ್ಥಿ. ನಂಜಪ್ಪ ಅವರ ಹಿರಿಯ ಸೋದರ ಡಾ.ಕೆ.ಎಸ್. ಗೌಡಯ್ಯ ಅವರ ಪುತ್ರ ಜಿ. ಪ್ರಕಾಶ್ ಜನತಾದಳದ ಅಭ್ಯರ್ಥಿ. ವಿಶ್ವನಾಥ್ ಎರಡನೇ ಬಾರಿಗೆ ಗೆದ್ದು, ಎಂ. ವೀರಪ್ಪ ಮೊಯ್ಲಿ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ, ಅರಣ್ಯ ಖಾತೆಯ ಸಚಿವರಾದರು. 1994ರ ವೇಳೆಗೆ ಜನತಾದಳದ ಇಬ್ಬಣಗಳು ಒಗ್ಗೂಡಿದ್ದವು. ನಂಜಪ್ಪ ಅವರು ಮೂರನೇ ಬಾರಿಗೆ ಗೆದ್ದರು. ಜನತಾದಳ ಅಧಿಕಾರಕ್ಕೆ ಬಂತು. ಅವರ ನಾಯಕ ಎಚ್.ಡಿ. ದೇವೇಗೌಡರು ರಾಜ್ಯದ ಮುಖ್ಯಮಂತ್ರಿಗಳಾದರು. ನಂಜಪ್ಪಣ್ಣ ಅವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡು, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ನೀಡಿದರು. ಜೊತೆಗೆ ಹಾಸನ ಜಿಲ್ಲಾ ಉಸ್ತುವಾರಿ ವಹಿಸಿದರು.
ಉತ್ತಮ ಕೆಲಸ: ನಂಜಪ್ಪ ಅವರು ಮಂತ್ರಿಯಾಗಿಯೂ ಉತ್ತಮವಾಗಿ ಕೆಲಸ ಮಾಡಿದರು. ಪಡಿತರ ಅವ್ಯವಸ್ಥೆಯನ್ನು ಸರಿಪಡಿಸಿ, ಟೋಕನ್ ವ್ಯವಸ್ಥೆ ಜಾರಿ ಮಾಡಿದರು. 1996ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜನತಾದಳಕ್ಕೆ 16 ಸ್ಥಾನಗಳು ಬಂದವು. ದೇವೇಗೌಡರು ಅನಿರೀಕ್ಷಿತವಾಗಿ ಪ್ರಧಾನಿ ಪಟ್ಟಕ್ಕೆ ಏರಿದರು. ನಂತರ ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾದರು. ಆದರೆ ನಂಜಪ್ಪ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಆ ವೇಳೆಗೆ ನಂಜಪ್ಪ ಅವರಿಗೂ ಅನಾರೋಗ್ಯ ಸಮಸ್ಯೆ. ಕಣ್ಣಿನ ತೊಂದರೆಯೂ ಇತ್ತು. ಹೀಗಾಗಿ ಸಕ್ರಿಯ ರಾಜಕಾರಣದಿಂದ ತೆರೆಯ ಮರೆಗೆ ಸರಿದರು.
ಅವರಿಗೆ ತಮ್ಮ ಮಗ ಬಸಂತ್ಗೆ ಟಿಕೆಟ್ ಕೊಡಿಸಿ, ಶಾಸಕರನ್ನಾಗಿ ಮಾಡಬೇಕು ಎಂಬ ಆಸೆ ಇತ್ತು. ಆದರೆ ಅದು ಕೈಗೂಡಲೇ ಇಲ್ಲ. 2013ರ ವಿಧಾನಸಭಾ ಚುನಾವಣೆಗೂ ಮುನ್ನಾ ಅವರ ಪುತ್ರ ಬಸಂತ್ ಬೆಂಗಳೂರಿಗೆ ತೆರಳಿ, ದೇವೇಗೌಡರನ್ನು ಕಂಡರು. ಟಿಕೆಟ್ ಸಿಗದಿದ್ದಾಗ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿ ಸೇರಿ, ಅಭ್ಯರ್ಥಿಯಾದರು. ಇಂಥ ಅನಿವಾರ್ಯ ಸ್ಥಿತಿ ಸೃಷ್ಟಿಯಾದ್ದರಿಂದ ನಂಜಪ್ಪ ಅವರು ಪಕ್ಷ ಹಾಗೂ ನಾಯಕ ನಿಷ್ಠೆಯ ವಿರುದ್ಧ ಹೋಗಬೇಕಾಯಿತಲ್ಲ ಎಂಬ ಯಾತನೆ ಅನುಭವಿಸಿದ್ದರು. ಕೆ.ಆರ್. ನಗರ ಕಾಂಗ್ರೆಸ್- ಜೆಡಿಎಸ್ ಜಿದ್ದಾಜಿದ್ದಿಯ ಕ್ಷೇತ್ರ. ಹೀಗಾಗಿ ಬಸಂತ್ ಸೋತರು.
ನಂಜಪ್ಪ ಅವರು ನವನಗರ ಅರ್ಬನ್ ಕೋ- ಆಪ್ ಬ್ಯಾಂಕ್ ಕಟ್ಟಿ ಬೆಳೆಸಿದ್ದಾರೆ. ರಾಜ್ಯ ನಗರ ಪಟ್ಟಣ ಬ್ಯಾಂಕ್ಗಳ ಮಹಾಮಂಡಲದ ನಿರ್ದೇಶಕರಾಗಿರುವ ಅವರ ಪುತ್ರ ಬಸಂತ್ ಈಗ ಅದನ್ನು ಮುನ್ನಡೆಸುತ್ತಿದ್ದಾರೆ.