ಖಾಸಗಿ ಶಾಲೆ ಸಾಧನೆ ಶ್ಲಾಘನೀಯ
ಹುಣಸೂರು: ಗ್ರಾಮಾಂತರ ಪ್ರದೇಶಗಳಲ್ಲಿ ಖಾಸಗಿ ಶಾಲೆ ನಡೆಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪೂಣ್ಯಭೂಮಿ ವಿದ್ಯಾಸಂಸ್ಥೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಸಂಗತಿ ಎಂದು ಶಾಸಕ ಎಚ್.ಪಿ. ಮಂಜುನಾಥ್ ಪ್ರಶಂಸೆ ವ್ಯಕ್ತಪಡಿಸಿದರು.
ಹನಗೋಡು ಹೋಬಳಿ ತಟ್ಟೆಕೆರೆ ಗ್ರಾಮದ ಪುಣ್ಯಭೂಮಿ ವಿದ್ಯಾಸಂಸ್ಥೆಯ ಶ್ರೀ ಮಾರುತಿ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಭವನ ಹಾಗೂ ಕಾಂಪೌಂಡ್ ನಿರ್ಮಾಣಕ್ಕೆ ಭೂಮಿಪೂಜೆ, ಹೆಣ್ಣು ಮಕ್ಕಳ ಶೌಚಾಲಯ ಉದ್ಘಾಟನೆ ಹಾಗೂ ಉಚಿತ ಸೈಕಲ್ ವಿತರಿಸಿ ಮಾತನಾಡಿದ ಅವರು, ಪುಣ್ಯಭೂಮಿ ವಿದ್ಯಾಸಂಸ್ಥೆಯನ್ನು ಕಠಿಣ ಪರಿಶ್ರಮದ ನಡುವೆಯೂ ಬದ್ಧತೆ ಹಾಗೂ ಕಾಳಜಿಯಿಂದ ಮುನ್ನಡೆಸಿ, ಉನ್ನತ ಮಟ್ಟಕ್ಕೆ ಏರಿಸಿರುವುದು ಸಂತೋಷದ ವಿಷಯ ಎಂದರು.
ನಿವೃತ್ತ ಮುಖ್ಯ ಶಿಕ್ಷಕರಾದ ವಿಧಾನ ಪರಿಷತ್ ಎನ್. ಸೋಮೇಗೌಡ, ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನೀವೃತ್ತರಾದ ಜಿ.ವಿ. ಲತಾ, ಪದವಿಯಲ್ಲಿ ಚಿನ್ನದ ಪದಕ ಪಡೆದ ಶಾಲೆಯ ಹಳೆಯ ವಿದ್ಯಾರ್ಥಿನಿ ಎಂ.ಪಿ. ಸ್ವಾತಿ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಎಂ. ರಂಜಿತ್ ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್. ನಾಗರಾಜ ಶ್ರೇಷ್ಠಿ ಅವನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್, ಐಟಿಸಿ ಕಂಪನಿಯ ಲೀಫ್ ಮ್ಯಾನೇಜರ್ ರಾಜಶೇಖರ್, ಜಿಪಂ ಸದಸ್ಯ ಸಿ.ಟಿ. ರಾಜಣ್ಣ, ತಾಪಂ ಸದಸ್ಯೆ ಪುಷ್ಪಲತಾ, ಮಾಜಿ ಸದಸ್ಯರಾದ ಸೋಮಶೇಖರ್, ಚಿನ್ನವೀರಯ್ಯ, ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಬಿಇಒ ರಾಜಶೇಖರ್, ಮುಖ್ಯ ಶಿಕ್ಷಕ ಲಕ್ಷ್ಮಿಕಾಂತ್, ಗ್ರಾಪಂ ಸದಸ್ಯರಾದ ರಾಮೇಗೌಡ, ಸೋಮಯ್ಯ, ನಿಲುವಾಗಿಲು ಪ್ರಕಾಶ ಇದ್ದರು.