ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸರ್ಕಾರಿ ಗೌರವಗಳೊಂದಿಗೆ ನಂಜಪ್ಪ ಅಂತ್ಯಕ್ರಿಯೆ

Rashmi Kasaragodu
Updated On : 28 Jan 2014, 1:02 am

ಕೆ.ಆರ್. ನಗರ: ಭಾನುವಾರ ರಾತ್ರಿ ನಿಧನರಾದ ಮಾಜಿ ಸಚಿವ ಎಸ್.ನಂಜಪ್ಪ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ ಪಟ್ಟಣದ ಸಾರ್ವಜನಿಕ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ನಂಜಪ್ಪ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಪಟ್ಟಣ ಹಾಗೂ ತಾಲೂಕಿನಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಮತ್ತು ಸಾರ್ವಜನಿಕರು ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು.  ವಿದ್ಯಾರ್ಥಿಗಳು ಕೂಡ ಸರತಿ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆದರು.
ಮೃತರ ಗೌರವಾರ್ಥವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಪಟ್ಟಣದಲ್ಲಿ ವರ್ತಕರು ಅಂಗಡಿ-ಮುಂಗಟ್ಟುಗಳನ್ನು ಮುಚ್ಚುವುದರ ಮೂಲಕ ಗೌರವ ಸಲ್ಲಿಸಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ಕುಂಟುಂಬದವರಿಗೆ ಸಾಂತ್ವನ ಹೇಳಿದರು. ಸಂಸದ ಎಚ್.ವಿಶ್ವನಾಥ್, ಮಾಜಿ ಸಚಿವ ಎಚ್.ಡಿ. ರೇವಣ್ಣ, ಶಾಸಕರಾದ ಎ. ಮಂಜು, ಸಾ.ರಾ. ಮಹೇಶ್, ವಾಸು, ಜಿ.ಟಿ. ದೇವೇಗೌಡ, ಎಸ್. ಚಿಕ್ಕಮಾದು, ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು, ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ, ಮಾಜಿ ಸ್ಪೀಕರ್ ಕೆ.ಆರ್. ಪೇಟೆ ಕೃಷ್ಣ, ಪುರಸಭಾ ಮಾಜಿ ಅಧ್ಯಕ್ಷ ತಮ್ಮನಾಯಕ್, ತಾ. ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ತಾಪಂ ಅಧ್ಯಕ್ಷೆ ಶಶಿಕಲಾ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ಸದಸ್ಯರಾದ ರಾಜಯ್ಯ, ಕಲ್ಪನಾ, ಸುಮಿತ್ರಮ್ಮ, ನಳಿನಾಕ್ಷಿ, ಪುಷ್ಪಲತಾ, ಎಪಿಎಂಸಿ ಅಧ್ಯಕ್ಷ ಎಂ. ರಮೇಶ್, ಉಪಾಧ್ಯಕ್ಷ ತೋಟಪ್ಪನಾಯಕ, ಡಾ. ಮೆಹಬೂಬ್ಖಾನ್, ಜಿಪಂ ಮಾಜಿ ಸದಸ್ಯ ಡಿ. ರವಿಶಂಕರ್, ಅಚ್ಚುತಾನಂದ, ಮರಿತಿಬ್ಬೇಗೌಡ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಕಾರ್ಯದರ್ಶಿ ಪ್ರಭಾಕರ್ ಜೈನ್, ತಾ. ಪತ್ರಕರ್ತರ ಸಂಘದ ಕುಪ್ಪೆ ಮಹದೇವಸ್ವಾಮಿ, ಅನೇಕ ಗಣ್ಯರು ಮತ್ತು ಮಠಾಧೀಶರು ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ.
ಅಜಾತ ಶತ್ರು: ನಂಜಪ್ಪ ಅವರು ಪಟ್ಟಣಕ್ಕೆ ಹತ್ತಾರು ಜನಪಯೋಗಿ ಕೆಲಸ ಮಾಡಿ ರಾಜಕಾರಣದಲ್ಲಿ ಅಜಾತ ಶತ್ರು ಎನಿಸಿಕೊಂಡಿದ್ದರು. ನಂಜಪ್ಪ ಅವರು ರಾಜಕೀಯದ ಜತೆಗೆ ಪಟ್ಟಣದಲ್ಲಿ 1998ರಲ್ಲಿ ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಸ್ಥಾಪಿಸಿ ಈವರೆಗೂ ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಒಂದು ದಶಕದಲ್ಲಿ ಅಪಾರ ಸಾಧನೆ ಮಾಡಿ ಮೂರು ಕೋಟಿಗೂ ಅಧಿಕ ಲಾಭ ಗಳಿಸುವುದಕ್ಕೆ ಅಪಾರ ಶ್ರಮ ವಹಿಸಿದ್ದರು.
ಮೂಲತಃ ವಕೀಲರಾಗಿದ್ದ ನಂಜಪ್ಪ ಅವರು 1968ರಲ್ಲಿ ತಾಲೂಕು ಮಂಡಳಿ ಸದಸ್ಯರಾಗಿ ರಾಜಕೀಯ ಪ್ರವೇಶಿಸಿ ನಂತರ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ನಂತರ 1997 ರಲ್ಲಿ ಅನಾರೋಗ್ಯಕ್ಕೀಡಾಗಿ ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದರು.
ಡಿ.ಸಿ. ತಮ್ಮಣ್ಣ, ಗಣೇಶ್ ಭೇಟಿ: ಕೆ.ಆರ್. ನಗರದಲ್ಲಿ ಭಾನುವಾರ ನಿಧನರಾದ ಮಾಜಿ ಸಚಿವ ಎಸ್. ನಂಜಪ್ಪ ಅವರಿಗೆ ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ ಮತ್ತು ಮಂಡ್ಯ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಚ್.ವಿ. ಗಣೇಶ್ ಅವರು ಕೆ.ಆರ್. ನಗರಕ್ಕೆ ಭೇಟಿ ನೀಡಿ, ನಂಜಪ್ಪ ಅವರಿಗೆ ಅಂತಿಮ ನಮನ ಸಲ್ಲಿಸಿದರು.



ನಿಧನಕ್ಕೆ ಸಂತಾಪ
ಮೈಸೂರು: ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಎಸ್.ನಂಜಪ್ಪ ಅವರ ನಿಧನಕ್ಕೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement