157 ಜೋಡಿಗಳಿಗೆ ಕಂಕಣಭಾಗ್ಯ
ಕ.ಪ್ರ.ವಾರ್ತೆ ಸುತ್ತೂರು ಜ. 28
ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಯವರ ಜಾತ್ರಾ ಮಹೋತ್ಸವ ಅಂಗವಾಗಿ ನಂಜನಗೂಡು ತಾಲೂಕು ಸುತ್ತೂರು ಶ್ರೀಕ್ಷೇತ್ರದಲ್ಲಿ ಮಂಗಳವಾರ 157 ಜೋಡಿಗಳು ಸಾಮೂಹಿಕ ವಿವಾಹ ಆಗುವ ಮೂಲಕ ಸತಿಪತಿಗಳಾದರು.
ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಈವರೆಗೆ ನಡೆದ ಸಾಮೂಹಿಕ ವಿವಾಹದಲ್ಲಿ 1,868 ಜೋಡಿಗಳು ಸತಿಪತಿಗಳಾಗಿದ್ದರು. ಈ ಬಾರಿಯ 15ನೇ ವರ್ಷದ ಸಾಮೂಹಿಕ ವಿವಾಹದಲ್ಲಿ ವಿವಿಧ ಧರ್ಮ ಮತ್ತು ಜಾತಿಯ 157 ಜೋಡಿಗಳು ಸತಿಪತಿಗಳಾದರು. ಇವರಲ್ಲಿ 82 ಜೋಡಿಗಳು ಪರಿಶಿಷ್ಟ ಜಾತಿ, 12 ಜೋಡಿಗಳು ಪರಿಶಿಷ್ಟ ಪಂಗಡ, 44 ಜೋಡಿಗಳು ಹಿಂದುಳಿದ ವರ್ಗ ಹಾಗೂ 19 ಜೋಡಿಗಳು ವೀರಶೈವ ಸಮುದಾಯಕ್ಕೆ ಸೇರಿದವರು.
ಇವರಲ್ಲಿ ಈ ವಿಶೇಷವಾಗಿ ತಮಿಳುನಾಡು ರಾಜ್ಯದ 11 ಜೋಡಿಗಳು, ಅಂತರ್ಜಾತಿ (ಕ್ರಿಶ್ಚಿಯನ್- ಹಿಂದೂ), ಅಂಗವಿಕಲ, ಕೇರಳ ಮತ್ತು ವಿಧವೆ- ವಿಧುರ ತಲಾ ಒಂದು ಜೋಡಿಗಳು ಸತಿಪತಿಗಳಾದವು. ಅಂಗವಿಕಲರಾದ ನಂಜನಗೂಡು ತಾಲೂಕು ಕಾರ್ಯದ ಕೆ.ಎನ್. ಗೀತಾ ಮತ್ತು ತಗಡೂರಿನ ಶ್ರೀಕಂಠಸ್ವಾಮಿ, ವಿಧವೆ- ವಿಧುರರಾದ ಗುಂಡ್ಲುಪೇಟೆ ತಾಲೂಕಿನ ನೇನೆಕಟ್ಟೆಯ ಎಂ. ಸುಮಾ ಮತ್ತು ಬೊಮ್ಮನಹಳ್ಳಿಯ ಜಿ. ಬೆಳ್ಳಪ್ಪ ಅವರು ವಿವಾಹವಾದರು.
ಹುಣಸೂರು ತಾಲೂಕು ಶಾಂತಿಪುರದ ಮೆಲ್ವಿನ್ ಸುಜಾತಾ ಮತ್ತು ಮಂಡ್ಯದ ಮೊಡಚಾಕನಹಳ್ಳಿಯ ಎಂ.ಬಿ. ಸುರೇಶ್ ಅವರು ಅಂತರಜಾತಿ ವಿವಾಹವಾದರು. ಇನ್ನು ತಮಿಳುನಾಡು ರಾಜ್ಯದ ಈರೋಡ್ ಜೋರ್ಸೋರ್ನ ಮಹದೇವ ಗುಂಡ್ಲುಪೇಟೆಯ ಬಿ.ಮಹದೇವಮ್ಮ, ಚಾಮರಾಜನಗರ ನವಿಲೂರಿನ ಮಹದೇವಮ್ಮ ಸತ್ಯಮಂಗಲ ಪನಕಹಳ್ಳಿಯ ಬಿ.ಶಿವಣ್ಣ, ಸತ್ತಿ ತಾಲೂಕಿನ ವಿವಿಧ ಗ್ರಾಮದವರಾದ ಕನಕ- ಮಹೇಶ್, ಸಂಪು- ಕನಕರಾಜ್, ಪದ್ಮಾ- ಮುತ್ತುಸ್ವಾಮಿ, ಕಲ್ಪನಾ- ಮುರುಗನ್, ರಾಜಮ್ಮ- ಹಾಲಪ್ಪ, ಶಿವಮ್ಮ- ಆರ್. ಗೋವಿಂದ, ಪ್ರಿಯಾ- ರಾಜೇಂದ್ರನ್, ಮನೋಮಣಿ- ಅರುಣ್ರಾಜ್ ಮತ್ತು ಮಂಗಳಮ್ಮ- ಶಿವಕುಮಾರ್ ಸುತ್ತೂರು ಜಾತ್ರೆಯಲ್ಲಿ ಸಂಸಾರ ಜೀವನಕ್ಕೆ ಕಾಲಿರಿಸಿದರು. 157 ಜೋಡಿಗಳಿಗೂ ಬಟ್ಟೆ ಸೇರಿದಂತೆ ಇನ್ನಿತರ ವಿವಾಹ ವಸ್ತುಗಳನ್ನು ಮಠದ ವತಿಯಿಂದ ಮುಂಚಿತವಾಗಿಯೇ ವಿತರಿಸಲಾಗಿತ್ತು. ಕರ್ತೃ ಗದ್ದುಗೆಯಿಂದ ಸಾಮೂಹಿಕ ವಿವಾಹ ಮಂಟಪದವರೆಗೆ ನವ ಜೋಡಿಗಳು ಮೆರವಣಿಗೆ ನಡೆಯಿತು. ವಧು- ವರರೊಂದಿಗೆ ನೂರಾರು ಮಂದಿ ಸಂಬಂಧಿಕರು ಸಹ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಜನಪದ ಕಲಾತಂಡಗಳು ಈ ಮೆರವಣಿಗೆಗೆ ರಂಗು ತುಂಬಿದವು. ಸ್ವಾಮೀಜಿಗಳು ಹಾಗೂ ಗಣ್ಯರು 157 ಜೋಡಿಗಳಿಗೆ ತಾಳಿ ವಿತರಿಸಿದರು. ಧಾರ್ಮಿಕ ವಿಧಿ ವಿಧಾನ ಪೂರೈಸಿದ ಬಳಿಕ ಸಾಮೂಹಿಕವಾಗಿ ಮಾಂಗಲ್ಯ ಧಾರಣೆ ಮಾಡಿಸಲಾಯಿತು.
ಸಾಮಾಜಿಕ ಕ್ರಾಂತಿ: ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮಾತನಾಡಿ, ಸುತ್ತೂರು ಮಠವು ಎಲ್ಲ ಜಾತಿ- ಧರ್ಮದವರಿಗೂ ಸಾಮೂಹಿಕ ವಿವಾಹ ಮಾಡಿಸುವ ಮೂಲಕ ಸಾಮಾಜಿಕ ಕ್ರಾಂತಿ ಮಾಡುತ್ತಿದೆ ಎಂದು ಹೇಳಿದರು.
ಆಡಂಬರವಿಲ್ಲದೆ ಸರಳ ಮದುವೆ ಮಾಡಿಸುವ ಮೂಲಕ ಸುತ್ತೂರು ಮಠವು ಸಮಾಜದಲ್ಲಿ ಬದಲಾವಣೆ ಮಾಡುತ್ತಿದೆ. ವಿಧವೆ, ಅಂತರ್ಜಾತಿ, ಅಂಗವಿಕಲರಿಗೂ ವಿವಾಹ ಮಾಡಿಸುವ ಮೂಲಕ ಸುತ್ತೂರು ಮಠವು ದೇಶಕ್ಕೆ ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದರು.
ವೈವಾಹಿಕ ಜವಾಬ್ದಾರಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಸಮ್ಮುಖ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲಿರುವ ವಿದ್ಯಾವಂತರು ಮದುವೆಯಾಗದೆ ಮಹಿಳೆಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಭಾರತೀಯರಾದ ನಮಗೆ ವೈವಾಹಿಕ ಜವಾಬ್ದಾರಿ ಇರಬೇಕು ಎಂದರು.ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಮಾತನಾಡಿ, ನಾನು ಸಹ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹದಲ್ಲಿ ಅಂತರಜಾತಿ ವಿವಾಹವಾಗಿದ್ದೇನೆ. ಪ್ರಸ್ತುತ ಅಂತರಜಾತಿ ವಿವಾಹವಾದವರಿಗೆ ಸಮಾಜದಲ್ಲಿ ಭದ್ರತೆ ಇಲ್ಲ. ಹೀಗಾಗಿ ಸರ್ಕಾರವು ಅಂತರಜಾತಿ ವಿವಾಹವಾದವರಿಗೆ ರಕ್ಷಣೆ, ಸೌಲಭ್ಯ ಒದಗಿಸುವುದರ ಜೊತೆಗೆ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉತ್ತರ ಕನ್ನಡ ಜಿಲ್ಲೆ ಸೋಂದಾ ಸ್ವಾದಿ ಜೈನಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಸಂಸದ ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್, ವಿಧಾನಪರಿಷತ್ ಸದಸ್ಯ ಜಿ. ರಘು ಆಚಾರ್, ಮಾಜಿ ಸಚಿವ ಎಂ.ಮಹದೇವು, ಮಾಜಿ ಶಾಸಕರಾದ ಎಚ್.ಎಸ್. ಶಂಕರಲಿಂಗೇಗೌಡ, ತೋಂಟದಾರ್ಯ, ಸಿ. ರಮೇಶ್, ಎಂಡಿಎ ಮಾಜಿ ಅಧ್ಯಕ್ಷ ಎಲ್. ನಾಗೇಂದ್ರ, ಮುಖಂಡರಾದ ಯಶಸ್ವಿ ಸೋಮಶೇಖರ್, ಜಯಪ್ರಕಾಶ್, ಕಾ.ಪು. ಸಿದ್ದಲಿಂಗಸ್ವಾಮಿ ಇದ್ದರು.