ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎಸ್ ಆ್ಯಂಡ್ ಎಸ್ ಪ್ರೈ.ಲಿ.ಗೆ ಕಂಟಕ ಶುರು

Mainashree
Updated On : 28 Jan 2014, 10:32 am

ಮೈಸೂರು: ಭೂಮಿ ಖರೀದಿಸಿ ಪರಿವರ್ತಿಸಿ ಮಾರಾಟ ಮಾಡುತ್ತಿರುವ ನಗರದ ಇಎಸ್‌ಎಸ್ ಆ್ಯಂಡ್ ಇಎಸ್‌ಎಸ್ (ಎಸ್ ಆ್ಯಂಡ್ ಎಸ್) ಇನ್‌ಫ್ರಾಸ್ಟ್ರಕ್ಚರ್ ಪ್ರೈ.ಲಿ. ತನ್ನ ವ್ಯವಹಾರದಲ್ಲಿ ವ್ಯಾಪಕವಾಗಿ ಕಪ್ಪು ಹಣ ಬಳಸುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಅವರು ಈ ಸಂಸ್ಥೆಯ ಬಗೆಗಿನ ಮಾಹಿತಿ ಕಲೆ ಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಎಸ್ ಆ್ಯಂಡ್ ಎಸ್ ಇನ್‌ಫ್ರಾಸ್ಟ್ರಕ್ಚರ್ ಪ್ರೈ.ಲಿ. ಸ್ವಯಂ ಘೋಷಿತ ವೆಬ್‌ಸೈಟ್‌ನ ಪ್ರಕಾರ 2600 ಎಕರೆಗಳ ಭೂ ಪ್ರದೇಶವನ್ನು ಖರೀದಿಸಿ, ಅಭಿವೃದ್ಧಿಪಡಿಸಿ, ಸುಮಾರು 25 ಸಾವಿರಕ್ಕೂ ಹೆಚ್ಚು ವಿವಿಧ ಅಳತೆಯ ನಿವೇಶನ ಮಾರಾಟ ಮಾಡಿರುವುದಾಗಿ ಘೋಷಿಸಿದೆ. ಇದನ್ನು ಆಧರಿಸಿ ನಗರದ ಇಬ್ಬರು ವ್ಯಕ್ತಿಗಳು ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿ, ಸಾವಿರಾರು ಎಕರೆ ಭೂಪ್ರದೇಶ ಖರೀದಿಸಿರುವುದು ಕರ್ನಾಟಕ ಭೂ ಕಂದಾಯ ಅಧಿನಿಯಮ, ಭೂ ಕಂದಾಯ ಅಧಿನಿಯಮ ಹಾಗೂ ಭೂ ಸುಧಾರಣಾ ಅಧಿನಿಯಮನಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಇವರಿಬ್ಬರ ಮನವಿಗಳನ್ನು ಪುರಸ್ಕರಿಸಿರುವ ಆಯುಕ್ತರು, ಈ ಸಂಸ್ಥೆಗೆ ಸಂಬಂಧಿಸಿದಂತೆ ಕೆಲವು ಮಾಹಿತಿ ಅವಶ್ಯಕವಿದ್ದು, ತಮ್ಮ ಇಲಾಖಾ ವ್ಯಾಪ್ತಿಯೊಳಗೆ ಬರುವ ಮಾಹಿತಿ ಹಾಗೂ ಅಗತ್ಯ ದಾಖಲೆಗಳನ್ನು 15 ದಿನಗಳೊಳಗೆ ತಮಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ, ಸಹಕಾರ ಉಪನಿಬಂಧಕರು, ಪಾಲಿಕೆ ಆಯುಕ್ತರು, ಎಂಡಿಎ ಆಯುಕ್ತರು, ಭೂ ದಾಖಲೆಗಳ ಉಪನಿರ್ದೇಶಕರು, ನಗರ ಮಾಪನ ಯೋಜನಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್ ಅವರಿಗೆ 24.1.2014 ರಂದು ಆದೇಶಿಸಿದ್ದಾರೆ (ಸಂಖ್ಯೆ- ಎಲ್‌ಎನ್‌ಡಿ- ಸಿಆರ್- 78- 2013-14).
ಏನೇನು ಮಾಹಿತಿ?: ಎಸ್ ಆಂಡ್ ಎಸ್ ಸಂಸ್ಥೆ ಜಿಲ್ಲಾ ವ್ಯಾಪ್ತಿಯಲ್ಲಿ ಎಷ್ಟು ಲೇಔಟ್ ಮಾಡಿದೆ? ಯಾವ ಯಾವ ಗ್ರಾಮದ, ಯಾವ ಯಾವ ಸರ್ವೆ ನಂಬರ್ ಜಮೀನುಗಳಲ್ಲಿ ಬಡಾವಣೆ ರಚಿಸಿದೆ? ಯಾವ ಸರ್ವೆ ನಂಬರ್‌ಗಳಲ್ಲಿ ಯಾವ ಯಾವ ವರ್ಷಗಳಲ್ಲಿ ಭೂಪರಿವರ್ತನೆ ಮಾಡಿದೆ? ಸರ್ವೆ ನಂಬರ್‌ಗೆ ಸಂಬಂಧಿಸಿದಂತೆ ಆಕಾರಬಂದ್, ಆರ್‌ಟಿಸಿ, ಮ್ಯುಟೇಷನ್, ಅಲಿನೇಷನ್, ಕಂದಾಯ ನಕಾಶೆ ಪ್ರತಿ, ಲೇಔಟ್‌ಗಳಿಗೆ ಸಂಬಂಧಿಸಿದಂತೆ ಎಂಡಿಎಯಿಂದ ನೀಡಿರುವ ಅನುಮತಿಗೆ ಸಂಬಂಧಿಸಿದ ಕಡತಗಳು, ಪಾಲಿಕೆಯಿಂದ ನೀಡಿರುವ ಅನುಮತಿಗೆ ಸಂಬಂಧಿಸಿದ ಕಡತಗಳು, ಲೇಔಟ್ ಆದ ನಂತರ ಲೇಔಟ್ ಅನ್ನು ಎಂಡಿಎ ಹಾಗೂ ಪಾಲಿಕೆಗೆ ಹಸ್ತಾಂತರಿರುವ ಬಗ್ಗೆ ಅಗತ್ಯ ದಾಖಲೆ ಸಹಿತ ಮಾಹಿತಿ ವಿವರ ನೀಡುವಂತೆ ಸೂಚಿಸಿದ್ದಾರೆ.
ಹಾಗೆಯೇ ಪಾಲಿಕೆಯಿಂದ ಹಕ್ಕು ದಾಖಲೆ, ಕಂದಾಯ ನಿಗದಿ, ಲೇಔಟ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮದ ಬಗೆಗಿನ ವಿವರ, ಈ ಸಂಸ್ಥೆಯ ಯಾವ ನಿಯಮಗಳಡಿ ನೋಂದಣಿಯಾಗಿರುತ್ತದೆ ಎಂಬ ವಿವರ ಮತ್ತು ಸರ್ಕಾರದ ಆದೇಶ/ ಸುತ್ತೋಲೆಯೊಂದಿಗೆ ಅಗತ್ಯ ದಾಖಲೆಗಳ ಸಹಿತ ಮಾಹಿತಿ, ಸಂಸ್ಥೆಯು ಅಭಿವೃದ್ಧಿಪಡಿಸಿರುವ ಲೇ- ಔಟ್‌ಗಳಿಗೆ ಸಂಬಂಧಿಸಿದಂತೆ ಯಾರಿಂದ, ಯಾರಿಗೆ, ಯಾವಾಗ ಜಮೀನು ಪಡೆಯಲಾಗಿದೆ ಎಂಬ ಬಗ್ಗೆ ವ್ಯವಹಾರ ವಿವರಣೆ ಅಗತ್ಯ ದಾಖಲೆ ಸಹಿತ ಮಾಹಿತಿ ನೀಡುವಂತೆ ಆದೇಶಿಸಿದ್ದಾರೆ.
ಎಂಡಿಎ ಸಭೆಯಲ್ಲಿ ಚರ್ಚೆ: ಇತ್ತೀಚೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಎಂ.ಕೆ. ಸೋಮಶೇಖರ್ ಮಾತನಾಡಿ, ಎಸ್ ಆ್ಯಂಡ್ ಎಸ್ ಸಂಸ್ಥೆಯು ಕಾನೂನು ಉಲ್ಲಂಘಿಸಿ ಬಡಾವಣೆ ರಚಿಸಿರುವ ಬಗ್ಗೆ ಲಿಖಿತ ದೂರು ಸಲ್ಲಿಸಿರುವ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದರು. ಇವರ ಮಾತಿಗೆ ದನಿಗೂಡಿಸಿದ ಗೋ. ಮಧುಸೂದನ್ ಅವರು, ಈ ಸಂಸ್ಥೆಯ ಬಗ್ಗೆ ತನಿಖೆ ಪೂರ್ಣಗೊಳ್ಳುವವರೆಗೆ ಈ ಸಂಸ್ಥೆಗೆ ಸಂಬಂಧಿಸಿದ ಖಾಸಗಿ ಬಡಾವಣೆ ನಕ್ಷೆಗಳ ಅನುಮೋದನೆ ತಡೆ ಹಿಡಿಯುವಂತೆ ಅಧ್ಯಕ್ಷರನ್ನು ಕೋರಿದರು. ಈ ಇಬ್ಬರು ಶಾಸಕರ ಅಭಿಪ್ರಾಯ ಪಡೆದ ಎಂಡಿಎ ಅಧ್ಯಕ್ಷೆ, ಜಿಲ್ಲಾಧಿಕಾರಿ ಸಿ. ಶಿಖಾ ಅವರು ಪ್ರಾದೇಶಿಕ ಆಯುಕ್ತರ ಕಾರ್ಯಾಲಯದಿಂದ ಮಾಹಿತಿ ತರಿಸೋಣ ಎಂದು ಸಭೆಗೆ ತಿಳಿಸಿದರು ಎಂಬ ಅಂಶ ಗೊತ್ತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement