ಕುಲಾಂತರಿ ತಳಿ ಅಪಾಯಕಾರಿಯಲ್ಲ: ಪ್ರೊ.ಎಂ. ಮಹದೇವಪ್ಪ
ಮೈಸೂರು: ಯಾವುದೇ ಕುಲಾಂತರಿ ತಳಿಯು ಅಪಾಯಕಾರಿಯಲ್ಲ ಎಂದು ಕೃಷಿ ವಿವಿ ವಿಶ್ರಾಂತ ಕುಲಪತಿ, ಪದ್ಮಭೂಷಣ ಪ್ರೊ.ಎಂ. ಮಹದೇವಪ್ಪ ಅಭಿಪ್ರಾಯಪಟ್ಟರು.
ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು ಏರ್ಪಡಿಸಿದ್ದ ಸುಸ್ಥಿರ ಜೀವನಕ್ಕೆ ರೇಷ್ಮೆ ಕೃಷಿ ಎಂಬ ಕಾರ್ಯಾಗಾರದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ದೇಶದಲ್ಲಿ ಕುಲಾಂತರಿ ತಳಿ ಬೇಡವೆಂದು ದೊಡ್ಡ ಗಲಾಟೆ ನಡೆಯಿತು. ಆದರೆ ಇಂದು ರಾಜ್ಯದಲ್ಲಿ ಹತ್ತಿ ಉತ್ಪಾದನೆಯಲ್ಲಿ ಶೇ.95 ರಷ್ಟು ಬಿಟಿ ಕಾಟನ್ ಬೆಳೆಯಲಾಗುತ್ತಿದೆ ಎಂದರು.
ಹತ್ತಿ ಉತ್ಪಾದನೆಯಲ್ಲಿ ದೇಶವು 5ನೇ ಸ್ಥಾನದಲ್ಲಿತ್ತು. ಆದರೆ ಬಿಟಿ ಕಾಟನ್ ತಳಿ ಬಂದ ಮೇಲೆ 2ನೇ ಸ್ಥಾನ ಪಡೆದಿದೆ. ಅಲ್ಲದೆ ರಫ್ತು ಪ್ರಮಾಣವು ಹೆಚ್ಚಿದೆ. ಈ ತಳಿ ಬಳಕೆಯಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಅಲ್ಲದೆ ಖರ್ಚು ಸಹ ಕಡಿಮೆಯಾಗಲಿದೆ. ಬೇರೆ ಬೆಳೆಗಳಲ್ಲಿಯೂ ಇಂತಹ ತಳಿ ಅವಶ್ಯಕ. ಹಾಗೆಯೇ ಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆ ಹೆಚ್ಚಾಗಿರುವುದರಿಂದ ಗುಣಮಟ್ಟದ ಆಹಾರ ಉತ್ಪಾದನೆಗೆ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.
ವಿವಿ ಸ್ಥಾಪಿಸಲಿ: ಕೇಂದ್ರ ಸರ್ಕಾರ 3 ಹೊಸ ರೇಷ್ಮೆ ಕೃಷಿ ವಿವಿಗಳ ಸ್ಥಾಪನೆಗೆ ಮುಂದಾಗಿದ್ದು, ಅದರಲ್ಲಿ ಒಂದು ವಿವಿಗೆ ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್ ಒತ್ತಡ ಹೇರಿದ್ದಾರೆ. ಆದ್ದರಿಂದ ಕರ್ನಾಟಕದಲ್ಲಿಯೂ ರೇಷ್ಮೆ ವಿವಿ ಸ್ಥಾಪನೆಗೆ ರೈತರು ಒತ್ತಾಯಿಸಬೇಕು. ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳಿಗೆ ಹತ್ತಿರವಾಗಿರುವ ಹಾಗೂ ಎಲ್ಲಾ ವಿಧದಲ್ಲೂ ಸೂಕ್ತವಾಗಿರುವ ಚಾಮರಾಜನಗರದಲ್ಲಿ ಈ ವಿವಿ ಸ್ಥಾಪಿಸಬೇಕು. ಈಗಾಗಲೇ ಈ ಸಂಬಂಧ ಸಂಸದ ಆರ್. ಧ್ರುವನಾರಾಯಣ ಅವರಿಗೆ ಮನವಿ ಮಾಡಿದ್ದೇನೆ ಎಂದರು.
ಕೃಷಿಯ ಸಂಶೋಧನೆ ಹಾಗೂ ವಿಸ್ತರಣೆ ರೈತರಿಗೆ ತಲುಪಬೇಕು. ಇಲಾಖೆಗಳಲ್ಲಿ ಅಗತ್ಯ ಸಿಬ್ಬಂದಿ ನೇಮಕವಾಗಬೇಕು. ಕೃಷಿ ವಿವಿಯ ವಿದ್ಯಾರ್ಥಿಗಳು ರೈತರೊಂದಿಗೆ ಸೇರಿ ಕಾರ್ಯಚಟುವಟಿಕೆ ನಡೆಸಬೇಕು. ಸಮಗ್ರ ಕೃಷಿ ನೀತಿ ಜಾರಿಗೆ ಬರಬೇಕು ಎಂದು ಅವರು ಆಶಿಸಿದರು.