ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೈಗಾರಿಕಾ ಅಭಿವೃದ್ಧಿಗೆ ಪ್ರಗತಿ- ಉನ್ನತಿ ಜಾರಿ

Mainashree
Updated On : 28 Jan 2014, 10:32 am

ಮೈಸೂರು: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಕೆನರಾ ಬ್ಯಾಂಕ್ ಭದ್ರತಾ ರಹಿತ ಸಾಲ ಸೌಲಭ್ಯ ನೀಡಲು ಪ್ರಗತಿ ಮತ್ತು ಉನ್ನತಿ ಎಂಬ ಹೊಸ ಕಾರ್ಯಕ್ರಮ ಜಾರಿಗೊಳಿಸಿದೆ ಎಂದು ಕೆನರಾ ಬ್ಯಾಂಕ್ ಮೈಸೂರು ವೃತ್ತ ಕಚೇರಿ ಉಪ ಮಹಾಪ್ರಬಂಧಕ ಡಾ.ಎಸ್.ಟಿ. ರಾಮಚಂದ್ರ ತಿಳಿಸಿದರು.
ನಜರ್‌ಬಾದ್‌ನ ಕೆನರಾ ಬ್ಯಾಂಕ್ ಮೈಸೂರು ವೃತ್ತ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಎಂಎಸ್‌ಎಂಇ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಜಿಲ್ಲಾ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಘ ಆಯೋಜಿಸಿದ್ದ ಸಣ್ಣ ಕೈಗಾರಿಕೆಗಳಿಗೆ ಭದ್ರತಾ ರಹಿತ ಸಾಲ ಯೋಜನೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉದ್ಯೋಗಾವಕಾಶ ಕಲ್ಪಿಸುವಲ್ಲಿ ಪ್ರಮುಖ ಪಾತ್ರವಹಿಸುವ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವುದಕ್ಕೆ ಬ್ಯಾಂಕ್ ಈ ಸಾಲಿನಿಂದ ಪ್ರಗತಿ ಮತ್ತು ಉನ್ನತಿ ಎಂಬ ಎರಡು ಹೊಸ ಯೋಜನೆ ಆರಂಭಿಸಿದೆ. ಈ ಯೋಜನೆಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ನಡೆಸುತ್ತಿರುವ ಕೈಗಾರಿಕೋದ್ಯಮಿಗಳು ಭದ್ರತೆ ಇಲ್ಲದೆ ಸಾಲ ಪಡೆಯಬಹುದು. ಈ ಹೊಸ ಯೋಜನೆಯಲ್ಲಿ ಸಾಲ ಪಡೆಯಲು ಆಸ್ತಿ, ಗ್ಯಾರಂಟಿ ಹಾಗೂ ಭದ್ರತೆ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.
ಮೈಸೂರು ವೃತ್ತ ವ್ಯಾಪ್ತಿಯ ಕೊಡಗು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ 136 ಶಾಖೆಗಳನ್ನು ಕೆನರಾ ಬ್ಯಾಂಕ್ ಹೊಂದಿದೆ. ಈ ಎಲ್ಲಾ ಶಾಖೆಗಳಿಂದ ಆರು ತಿಂಗಳಲ್ಲಿ 4 ಲಕ್ಷ ಮಂದಿಗೆ ಭದ್ರತೆ ಇಲ್ಲದೆ ಸಾಲ ನೀಡಲಾಗಿದೆ. ಈ ಭಾಗದಲ್ಲಿ ಯೋಜನೆ ಕುರಿತು ಮಾಹಿತಿ ಇಲ್ಲದಿರುವುದರಿಂದ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಎಂಎಸ್‌ಎಂಎಫ್‌ಗೆ ಕೆನರಾ ಬ್ಯಾಂಕ್ ಶೇ.65 ರಷ್ಟು ಸಾಲ ನೀಡಿದೆ. ಬ್ಯಾಂಕ್‌ನಿಂದ ಸಾಲ ಪಡೆದವರು 180 ಕೋಟಿ ವಹಿವಾಟು ನಡೆಸುವಷ್ಟು ಪ್ರಗತಿ ಹೊಂದಿದ್ದಾರೆ ಎಂದರು.
ಕಾಫಿ ಉದ್ಯಮಕ್ಕೆ ಉತ್ತೇಜನ: ಬ್ಯಾಂಕ್ ಈ ಸಾಲಿನಿಂದ ಕಾಫಿ ಉದ್ಯಮ ಆರಂಭಿಸುವವರಿಗೆ ಹೊಸದಾಗಿ ಸಾಲ ನೀಡುವ ಮತ್ತೊಂದು ಯೋಜನೆ ಆರಂಭಿಸಿದೆ. ಕಾಫಿ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಉದ್ಯಮ ಆರಂಭಿಸುವವರಿಗೆ ಸಾಲ ನೀಡಲಾಗುತ್ತದೆ. ಕಾಫಿ ಕ್ಯೂರಿಂಗ್, ಸಂಸ್ಕರಣಾ ಘಟಕ ಮತ್ತು ಔಟ್‌ಲೆಟ್ ತೆರೆಯಲು ಆಸಕ್ತ ಉದ್ಯಮಿಗಳು ಕೆನರಾ ಬ್ಯಾಂಕ್‌ನಿಂದ 1 ಕೋಟಿವರೆಗೆ ಸಾಲ ಪಡೆಯಬಹುದು. ಈ ಯೋಜನೆಗೆ ರಾಜ್ಯ ಸರ್ಕಾರ ಶೇ. 25 ರಷ್ಟು ಸಬ್ಸಿಡಿ ನೀಡುತ್ತದೆ. ಇದನ್ನು ಮನಗಂಡು ಕಾಫಿ ಉದ್ಯಮ ಆರಂಭಿಸುವವರು ಸಾಲ ಪಡೆಯುವಂತೆ  ಅವರು ಮನವಿ ಮಾಡಿದರು.
ಎಲ್ಲಾ ಬ್ಯಾಂಕ್‌ಗಳು ಕೈಗಾರಿಕೆಗಳ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ಸಾಲ ಪಡೆದ ಉದ್ಯಮಿಗಳು ತಮ್ಮ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಪರಿಶ್ರಮ ಪಡಬೇಕು ಎಂದರು.
ಕಾರ್ಯಕ್ರಮವನ್ನು ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ಎಸ್.ಎನ್. ರಂಗಪ್ರಸಾದ್ ಉದ್ಘಾಟಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಂ. ಶಿವಶಂಕರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಅಧ್ಯಕ್ಷ ಪಿ. ವಿಶ್ವನಾಥ್, ಜಿಲ್ಲಾ ಸೂಕ್ಷ್ಮ,  ಟಿ.ಡಿ. ಜಯಚಂದ್ರ ಅರಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement