ತುಂಡು ಗುತ್ತಿಗೆಯಲ್ಲಿ ಅವ್ಯವಹಾರ
ಕ.ಪ್ರ.ವಾರ್ತೆ ಮೈಸೂರು ಜ. 28
ನಗರಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡು ತುಂಡು ಗುತ್ತಿಗೆ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ವಿಚಾರಣೆ ನಡೆಸಿದರು.
ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ವಿಚಾರಣೆಯಲ್ಲಿ ದೂರುದಾರ, ಮಾಜಿ ಮೇಯರ್ ನಾರಾಯಣ, ಪಾಲಿಕೆ 25 ರಿಂದ 30 ಮಂದಿ ಅಧಿಕಾರಿಗಳು ಹಾಜರಾಗಿ ಹೇಳಿಕೆ ನೀಡಿದರು. ಪಾಲಿಕೆ ಆಯುಕ್ತರು ಚುನಾವಣೆ ಕಾರ್ಯ ನಿಮಿತ್ತ ಅನುಮತಿ ಪಡೆದು ಬೆಂಗಳೂರಿಗೆ ತೆರಳಿದ್ದರು. ಒಟ್ಟಾರೆ ಎಲ್ಲರ ಹೇಳಿಕೆಯನ್ನು ದಾಖಲೀಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಯಿತು.
ಆರೋಪವೇನು?: 2013-14ನೇ ಸಾಲಿನಲ್ಲಿ ಕೈಗೊಂಡಿರುವ 5 ಕೋಟಿ ತುಂಡು ಗುತ್ತಿಗೆ ಕಾಮಗಾರಿಯಲ್ಲಿ ಸುಮಾರು 10 ಲಕ್ಷ ಹಣವನ್ನು ಅಧಿಕಾರಿಗಳು, ಗುತ್ತಿಗೆದಾರರು ವಂಚಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಅಳುಗುಂಡಿ ಪುನರ್ ನಿರ್ಮಾಣ ಕಾಮಗಾರಿಯಲ್ಲಿ 86 ಸಾವಿರ ಬದಲು 96 ಸಾವಿರ ಎಂದು ನಮೂದಿಸಲಾಗಿದೆ. ಆದರೆ, ಕಾಮಗಾರಿಗೆ 7 ಸಾವಿರ ಮಾತ್ರ ಖರ್ಚಾಗಿದೆ. ಪಾಲಿಕೆಯಲ್ಲಿರುವ ಶಾಸಕರ ಕೊಠಡಿಗೆ ಕೇವಲ ಟ್ಯೂಬ್‌ಲೈಟ್ ಅಳವಡಿಸಿ ಇಡೀ ಕೊಠಡಿಯನ್ನೇ ನವೀಕರಿಸಲಾಗಿದೆ ಎಂದು ಸುಳ್ಳು ಹೇಳಿ ಬಿಲ್ ಪಾವತಿ ಮಾಡಿಕೊಳ್ಳಲಾಗಿದೆ. ಚುನಾವಣಾ ಶಾಖೆಯಲ್ಲಿ ಯುಪಿಎಸ್ ಅಳವಡಿಸಲು 68 ಸಾವಿರ ವೆಚ್ಚ ಮಾಡಲಾಗಿದೆ. ಆಯುಕ್ತರ ಕೊಠಡಿಗೆ ಎಸಿ ಅಳವಡಿಸಲಾಗಿದೆ ಎಂದು 54 ಸಾವಿರ ಬಿಲ್ ತೋರಿಸಲಾಗಿದೆ. ಅಲ್ಲಿ ಎಸಿ ಇಲ್ಲ ಎಂದು ನಾರಾಯಣ ದೂರಿದ್ದರು.