ಮಠಗಳ ಆಡಳಿತ ತೆಗೆದುಕೊಳ್ಳುವುದು ಅಗತ್ಯವಿಲ್ಲ
ಸುತ್ತೂರು: ಮಠಗಳ ಆಡಳಿತವನ್ನು ಸರ್ಕಾರ ತೆಗೆದುಕೊಳ್ಳುವುದು ಹಾಗೂ ಇದಕ್ಕಾಗಿ ಹೊಸದಾಗಿ ಕಾನೂನು ರಚಿಸುವುದು ಅಗತ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತಕುಮಾರ್ ಹೇಳಿದರು.
ಸುತ್ತೂರು ಜಾತ್ರೆಯಲ್ಲಿ ಮಂಗಳವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಧಾರ್ಮಿಕ ಕ್ಷೇತ್ರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದು ಬೇಡ. ರಾಜಕಾರಣದಲ್ಲಿ ಧರ್ಮ ಬೇಕಾಗಿದೆ. ಧರ್ಮಕ್ಕೆ ರಾಜಕಾರಣ ಮತ್ತು ಸರ್ಕಾರ ಬೇಕಾಗಿಲ್ಲ ಎಂದರು.
ಮಠಗಳನ್ನು ನಿಯಂತ್ರಿಸಲು ಸರ್ಕಾರ ಮುಂದಾದರೆ ಇಡೀ ಸಮಾಜವೇ ಸಿಡಿದೇಳುತ್ತದೆ. ಹೀಗಾಗಿ ಮಠಗಳ ಆಡಳಿತವು ಮಠಾಧೀಶರು, ಭಕ್ತರ ಕೈಯಲ್ಲಿ ಇರಲಿ. ಸರ್ಕಾರದ ತೆಗೆದುಕೊಳ್ಳುವುದು ಬೇಡ. ರಾಜ್ಯ ಸರ್ಕಾರವು ಮಠಗಳ ಆಡಳಿತ ತೆಗೆದುಕೊಳ್ಳಲು ಕರಾಳ ಶಾಸನ ರಚಿಸುವ ಆಲೋಚನೆ ಮಾಡಿದೆ. ಈಗಿರುವ ಧಾರ್ಮಿಕ ದತ್ತಿ ಕಾನೂನು ಪ್ರಕಾರ ಮಠಗಳು ಸರ್ಕಾರ ಹಿಡಿತದಿಂದ ಹೊರತಾಗಿವೆ. ಮಠಗಳ ಕುಂದು ಕೊರತೆ ಸರಿಪಡಿಸಲು ಈಗಾಗಲೇ ಕಾನೂನುಗಳಿವೆ. ಹಿಂದೂ ಧಾರ್ಮಿಕ ಸ್ವಾತಂತ್ರ್ಯಕ್ಕೆ ದೊಡ್ಡ ಪೆಟ್ಟು, ಧಕ್ಕೆಯಾಗುವಂತಹ ಕರಾಳ ಶಾಸನವನ್ನು ಜಾರಿಗೊಳಿಸಿದರೆ ವಿಧಾನ ಮಂಡಲ ಒಳಗೂ ಹೊರಗೂ ವಿರೋಧಿಸುವುದಾಗಿ ಅವರು ಎಚ್ಚರಿಸಿದರು.
ಮಠಗಳ ತಂಟೆಗೆ ಬರಬೇಡಿ: ಮಾಜಿ ಸಚಿವ ಎಂ. ಮಹದೇವ್ ಮಾತನಾಡಿ, ಮಠಗಳ ಬಗ್ಗೆ ಕೆಲವರು ಟೀಕೆ ಮಾಡುತ್ತಿದ್ದಾರೆ. ಸರ್ಕಾರ ಮತ್ತು ಸ್ವಯಂ ಸಂಸ್ಥೆಗಳು ಯಾವುದೂ ಸಹ ಮಠಗಳ ತಂಟೆಗೆ ಬರಬೇಡಿ. ದೊಡ್ಡದು, ಸಣ್ಣದು ಎಂದು ಜಾತಿ ಹೆಸರಿನಲ್ಲಿ ಮಠಗಳ ವಿಭಜನೆ ಮಾಡುತ್ತಿರುವುದು ಸರಿಯಲ್ಲ. ಇದು ಅವರಿಗೆ ಮಾರಕವಾಗಲಿದೆ. ಎಲ್ಲ ಮಠಗಳು ಧಾರ್ಮಿಕ ಹಾಗೂ ಸಾಮಾಜಿಕ ಸುಧಾರಣೆ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ಮಾಜಿ ಶಾಸಕ ಎಚ್.ಎಸ್. ಶಂಕರಲಿಂಗೇಗೌಡ ಮಾತನಾಡಿ, ಟೀಕೆ ಮಾಡುವುದು ತಪ್ಪಲ್ಲ. ಟೀಕೆಯಲ್ಲಿ ವಸ್ತುಸ್ಥಿತಿ ಇರಬೇಕು. ಕೆಲವರು ಟೀಕೆ ಮಾಡುವ ಸಲುವಾಗಿಯೇ ಹುಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.