ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರೇಷ್ಮೆ ಕೃಷಿಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ

Mainashree
Updated On : 28 Jan 2014, 10:26 am

ಕ.ಪ್ರ.ವಾರ್ತೆ   ಮೈಸೂರು   ಜ. 28
ದೇಶದ ಕೃಷಿಯಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆದಿದೆ ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಎನ್.ಎಸ್. ಬಿಸ್ಸೇಗೌಡ ಹೇಳಿದರು.
ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಕರ್ನಾಟಕ ರಾಜ್ಯ ರೇಷ್ಮೆ ಇಲಾಖೆ ಸಹಯೋಗದೊಂದಿಗೆ ಶ್ರೀರಾಂಪುರದ ಸಿಎಸ್‌ಆರ್‌ಟಿಐ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸುಸ್ಥಿರ ಜೀವನಕ್ಕೆ ರೇಷ್ಮೆ ಕೃಷಿ ಎಂಬ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದಲ್ಲಿ ಚೀನಾ ದೇಶವು ವಾರ್ಷಿಕ 1.26 ಲಕ್ಷ ಮೆಟ್ರಿಕ್ ಟನ್ ರೇಷ್ಮೆ ಉತ್ಪಾದಿಸಿ ಪ್ರಥಮ ಸ್ಥಾನದಲ್ಲಿದೆ. ಭಾರತವು 23,679 ಮೆಟ್ರಿಕ್ ಟನ್ ರೇಷ್ಮೆ ಬೆಳೆದು ಎರಡನೇ ಸ್ಥಾನದಲ್ಲಿದೆ. ಕರ್ನಾಟಕವು 8, 219 ಮೆಟ್ರಿಕ್ ಟನ್ ಉತ್ಪಾದಿಸಿ ದೇಶದಲ್ಲಿಯೇ ರೇಷ್ಮೆ ಕೃಷಿಯಲ್ಲಿ ಸಿಂಹಪಾಲು ಹೊಂದಿದೆ ಎಂದರು.
ಹಿಪ್ಪುನೇರಳೆ ಕೃಷಿಯ ವಾರ್ಷಿಕ ಉತ್ಪಾದನೆ 18,715 ಮೆಟ್ರಿಕ್ ಟನ್ ಆಗಿದ್ದು, ವಾರ್ಷಿಕ 33 ಸಾವಿರ ಮೆಟ್ರಿಕ್ ಟನ್ ರೇಷ್ಮೆ ಬೇಡಿಕೆಯಿದ್ದು, ಸುಮಾರು 10 ಸಾವಿರ ಮೆಟ್ರಿಕ್ ಟನ್ ಕೊರತೆಯಿದೆ. ಇದನ್ನು ನೀಗಿಸಲು ಹೊಸದಾಗಿ 1.20 ಲಕ್ಷ ಹೆಕ್ಟೆರ್‌ನಲ್ಲಿ ಹೊಸದಾಗಿ ಹಿಪ್ಪುನೇರಳೆ ಬೆಳೆಸಬೇಕು ಎಂದು ತಿಳಿಸಿದರು.
ಕಡಿಮೆಯಾಗುತ್ತಿರುವ ಬೆಳೆ: ಕರ್ನಾಟಕದಲ್ಲಿ ಹಿಪ್ಪುನೇರಳ ಕೃಷಿಗೆ ಹಿರಿಮೆ ಹಾಗೂ ಇತಿಹಾಸವಿದ್ದು, ಮೈಸೂರು ರಾಜರು ಹಾಗೂ ಟಿಪ್ಪು ಸುಲ್ತಾನ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರ. ಆದರೆ ಇತ್ತೀಚೆಗೆ ರಾಜ್ಯದ ಕೋಲಾರ,  ಬೆಂಗಳೂರು, ಚಾಮರಾಜನಗರ, ಚನ್ನಪಟ್ಟಣ್ಣ, ರಾಮನಗರ, ಮೈಸೂರು ಭಾಗಗಳಲ್ಲಿ ಕಡಿಮೆಯಾಗುತ್ತಿದೆ. ಉತ್ತರ ಭಾಗದಲ್ಲಿಯೂ ರೇಷ್ಮೆ ಕೃಷಿಗೆ ಹೆಚ್ಚಿನ ಪ್ರೊತ್ಸಾಹ ನೀಡಿಲಾಗುತ್ತಿದೆ ಎಂದರು.   
ಕೇಂದ್ರದ ವಿಜ್ಞಾನಿಗಳು ಹಲವಾರು ರೇಷ್ಮೆ ತಳಿಗಳನ್ನು ಸಂಶೋಧನೆ ನಡೆಸಿ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಗೆ ಬಳಸಿಕೊಂಡು ರೈತರು ಈ ಕೃಷಿಯಲ್ಲಿ ತೊಡಗಬೇಕು. ಆಗ ಮಾತ್ರ ಬೆಳೆಗಾರರ ಬದುಕು ಬಂಗಾರವಾಗಲಿದೆ ಎಂದು ಆಶಿಸಿದರು. ನೂತನ ಹೈಬ್ರಿಡ್ ತಳಿಯನ್ನು ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿ ಇಶಿತ ರಾಯ್ ಬಿಡುಗಡೆಗೊಳಿಸಿದರು. ಕೃಷಿ ವಿವಿಯ ವಿಶ್ರಾಂತ ಕುಲಪತಿ  ಪದ್ಮಭೂಷಣ ಪ್ರೊ.ಎಂ. ಮಹದೇವಪ್ಪ ಪ್ರಧಾನ ಭಾಷಣ ಮಾಡಿದರು. ರಾಜ್ಯ ರೇಷ್ಮೆ ಇಲಾಖೆ ಆಯುಕ್ತ ಜಿ.ಸತೀಶ್, ಮಂಡಳಿ ಸದಸ್ಯರಾದ ಎಂ.ಪಿ. ಲಕ್ಷ್ಮೀಕಾಂತ್, ಆರ್.ಎಚ್. ಜಯರಾಂ ರೆಡ್ಡಿ, ಆರ್.ಕೆ. ರಾಮಕೃಷ್ಣಪ್ಪ, ಬಿ.ಸಿ. ಉಮೇಶ್ ಬಾಬು, ಕೆ.ಬಿ. ಶಾಂತಮೂರ್ತಿ ಮುಖ್ಯ ಅತಿಥಿಗಳಾಗಿದ್ದರು. ಸಿಎಸ್‌ಆರ್‌ಟಿಸಿ ಸಹಾಯಕ ನಿರ್ದೇಶಕ ಅರವಿಂದೋ ಇದ್ದರು. ನಿರ್ದೇಶಕ ಡಾ.ಬಿ. ಬಿ. ಬಿಂದ್ರೂ ಸ್ವಾಗತಿಸಿದರು. ವಿಜ್ಞಾನಿ ಡಾ.ಟಿ. ತಿಪ್ಪೇಸ್ವಾಮಿ ನಿರೂಪಿಸಿದರು.
ವಸ್ತು ಪ್ರದರ್ಶನ: ಕಾರ್ಯಾಗಾರದ ಅಂಗವಾಗಿ ಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ ರೇಷ್ಮೆ ಕೃಷಿ  ವಸ್ತು ಪ್ರದರ್ಶನವನ್ನು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಎನ್.ಎಸ್. ಬಿಸ್ಸೇಗೌಡ ಉದ್ಘಾಟಿಸಿದರು. ರೇಷ್ಮೆ ಗೂಡು, ಚಂದ್ರಿಕೆ, ಮೊಟ್ಟೆ, ಔಷಧ ಸಿಂಪಡಿಸುವ ಸಾಧನ, ಹಿಪ್ಪುನೇರಳೆ ಕತ್ತರಿಸುವ ಯಂತ್ರ ಸೇರಿ ಅಗತ್ಯ ಸಾಮಗ್ರಿಗಳು, ಉತ್ಪನ್ನಗಳು,  ಮಾಹಿತಿ ಸಾದರಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement