ಸರ್ಕಾರಿ ಕೆರೆ ಒತ್ತುವರಿ ತೆರವಿಗೆ ಶೀಘ್ರ ಕ್ರಮ
ಪಿರಿಯಾಪಟ್ಟಣ: ಒತ್ತುವರಿಯಾಗಿರುವ ಸರ್ಕಾರಿ ಕೆರೆ ಕಟ್ಟೆಗಳನ್ನು ನಿರ್ದಾಕ್ಷಿಣ್ಯವಾಗಿ ಕಾನೂನಿನ ಚೌಕಟ್ಟಿನಲ್ಲಿ ತೆರವುಗೊಳಿಸಲಾಗುವುದು ಎಂದು ತಹಸೀಲ್ದಾರ್ ಎಂ.ಕೆ. ಸವಿತಾ ಹೇಳಿದರು.
ಪಟ್ಟಣಕ್ಕೆ ಹೊಂದಿಕೊಂಡಂತಿರುವ ಚಿಕ್ಕರಸನಕೆರೆ ಒತ್ತುವರಿ ಜಾಗಕ್ಕೆ ಭೇಟಿ ನೀಡಿ ಒತ್ತುವರಿಯ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಸರ್ಕಾರಿ ಜಾಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದ್ದು, ಕೆರೆಗಳ ಒತ್ತುವರಿ ಜಾಗಗಳನ್ನು ಪರಿಶೀಲಿಸಿ ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಮೀಪದ ಮೆಲ್ಲಹಳ್ಳಿ ಗ್ರಾಮದ ಸರ್ವೆ ನಂ.107 ರಲ್ಲಿ 36.13 ಎಕರೆ ಕೆರೆ ಜಾಗ, ಸರ್ವೆ ನಂ.114 ರಲ್ಲಿ 5.32 ಎಕರೆ ಜಾಗ, ಸರ್ವೆ ನಂ.100 ರಲ್ಲಿ ಒಂದು ಎಕರೆಗೂ ಹೆಚ್ಚಿರುವ ಜಾಗಗಳ ಸರ್ವೆ ನಡೆಸಿ ಇಲ್ಲಿ ಮನೆ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ಕಟ್ಟಿಕೊಂಡಿರುವವರಿಗೆ ನೋಟಿಸ್ ನೀಡಲಾಗುವುದು ಎಂದು ಹೇಳಿದರು.
ಪಟ್ಟಣದ ಚಿಕ್ಕರಸನಕೆರೆ ಒತ್ತುವರಿ ಜಾಗಕ್ಕೆ ಸಂಬಂಧಿಸಿದಂತೆ ಕಂದಾಯ ನಿರೀಕ್ಷಕ ಮರಿಗೌಡ ಅವರಿಗೆ ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದರು. ಅಲ್ಲದೆ ಮತ್ತಿತರೆ ಸರ್ವೆ ನಂಬರ್‌ಗಳಲ್ಲಿನ ಒತ್ತುವರಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಕಂದಾಯ ನಿರೀಕ್ಷಕ ಪುಟ್ಟಶೆಟ್ಟಿ ಅವರಿಗೆ ಆದೇಶಿಸಿದರು. ಸರ್ವೆಯರ್‌ಗಳಾದ ಮುನಿಯಪ್ಪ, ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿ ಬೋಪಯ್ಯ ಇದ್ದರು.