ಸಾಹಿತಿ ದೇಜಗೌ ಆರೋಗ್ಯ ವಿಚಾರಿಸಿದ ಮೊಯ್ಲಿ
ಮೈಸೂರು: ಅನಾರೋಗ್ಯದಿಂದ ನಗರದ ಚಂದ್ರಕಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಸಾಹಿತಿ ಪ್ರೊ.ದೇಜಗೌ ಅವರನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಡಾ.ಎಂ. ವೀರಪ್ಪ ಮೊಯ್ಲಿ ಅವರು ಮಂಗಳವಾರ ಭೇಟಿ ಮಾಡಿ, ಯೋಗಕ್ಷೇವು ವಿಚಾರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಡಿಕೇರಿ ಪ್ರವಾಸದಲ್ಲಿದ್ದ ನನಗೆ ದೇಜಗೌ ಅವರು ಆನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ ಎಂಬ ವಿಷಯ ತಿಳಿದ ಹಿನ್ನೆಲೆಯಲ್ಲಿ ಮೈಸೂರಿಗೆ ಬಂದು ಆಸ್ಪತ್ರೆಗೆ ಭೇಟಿ ನೀಡಿ, ಅವರ ಕುಶಲೋಪರಿ ವಿಚಾರಿಸಿದ್ದಾಗಿ ಹೇಳಿದರು.
ಆದರ್ಶಪ್ರಾಯರಾದ ಪ್ರೊ. ದೇಜಗೌ ಅವರು ಇನ್ನೂ ಹತ್ತಾರು ವರ್ಷ ಆರೋಗ್ಯವಾಗಿರಬೇಕು. ನಮಗೆಲ್ಲಾ ಮಾರ್ಗದರ್ಶನ ಮಾಡಬೇಕು ಎಂದ ಅವರು, ಬೇಗ ಗುಣಮುಖರಾಗಲೆಂದು ಹಾರೈಸಿದರು.
ಸುಮಾರು 14 ವರ್ಷಗಳ ಹಿಂದೆ ದೇಜಗೌ ಪಾರ್ಶ್ವವಾಯು ಪೀಡಿತರಾಗಿ ಆಸ್ಪತ್ರೆ ಸೇರಿದ್ದಾಗ ವೀರಪ್ಪ ಮೊಯ್ಲಿ ಅವರು ಬಂದು ಆರೋಗ್ಯ ವಿಚಾರಿಸಿದ್ದರು. ಇದೀಗ ದೇಜಗೌ ಅವರು ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗ ಬೇಕಾಗಿರುವ ಹಿನ್ನೆಲೆಯಲ್ಲಿ ಅವರು ಪೂರ್ವಭಾವಿಯಾಗಿ ವೈದ್ಯರ ತಪಾಸಣೆಗೆ ಒಳಗಾಗಿದ್ದಾರೆ. ಶಾಸಕ ವಾಸು, ನಗರ ಪಾಲಿಕೆ ಸದಸ್ಯರಾದ ಭಾಗ್ಯವತಿ ಸುಬ್ರಹ್ಮಣ್ಯ, ರಮೇಶ್, ಮಾಜಿ ಮೇಯರ್ ಶ್ರೀಕಂಠಮೂರ್ತಿ, ಯುವ ಕಾಂಗ್ರೆಸ್ ಅಧ್ಯಕ್ಷ ರಘು, ಮುಖ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಎಂ.ಎನ್. ವಿಜಯ್ ವೆಂಕಟೇಶ್, ಕೆನರಾ ಬ್ಯಾಂಕ್ ಡಿಜಿಎಂ ಡಾ.ಎಸ್.ಟಿ. ರಾಮಚಂದ್ರ ಸೇರಿದಂತೆ ಇತರರಿದ್ದರು.