ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸುದ್ದಿ ಸಂಕ್ಷೇಪ

Mainashree
Updated On : 28 Jan 2014, 10:27 am

ಪ್ರಯೋಗಾಲಯ ಉದ್ಘಾಟನೆ ಇಂದು
ಮೈಸೂರು: ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ನವೀಕೃತ ವಿಜ್ಞಾನ ಪ್ರಯೋಗಾಲಯ ಮತ್ತು ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮವನ್ನು ಜ.29ರ ಬೆಳಗ್ಗೆ 11ಕ್ಕೆ ಶೇಷಾದ್ರಿ ಅಯ್ಯರ್ ರಸ್ತೆಯ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದೆ. ವಿದ್ಯಾವರ್ಧಕ ಸಂಘದ ಗೌರವ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಲಿದ್ದು, ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಪ್ರಯೋಗಶಾಲೆ ಉದ್ಘಾಟಿಸುವರು. ಪೂಜಾ ಭಾಗವತ್ ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಸಿ.ಕೆ. ರೇಣುಕಾರ್ಯ, ಸಂಘದ ಗೌರವ ಕಾರ್ಯದರ್ಶಿ ಪಿ. ವಿಶ್ವನಾಥ್, ಕೋಶಾಧ್ಯಕ್ಷ ಎಸ್.ಎನ್. ಲಕ್ಷ್ಮೀನಾರಾಯಣ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಜವರೇಗೌಡ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪಿಯು ಕಾಲೇಜಿನ ಭೌತಶಾಸ್ತ್ರ ಪ್ರಯೋಗಾಲಯ, ಜೀವಶಾಸ್ತ್ರ ಪ್ರಯೋಗಾಲಯ, ಗಣಕ ವಿಜ್ಞಾನ ಪ್ರಯೋಗಾಲಯ ಮತ್ತು ರಾಸಾಯನಶಾಸ್ತ್ರ ಪ್ರಯೋಗಾಲಯಗಳು ಉದ್ಘಾಟನೆಗೊಳ್ಳಲಿವೆ ಎಂದರು.
ಸರ್ಕಾರಿ ನೌಕರರಿಗೆ ಸೂಚನೆ
ಮೈಸೂರು: ರಾಜ್ಯ ಸರ್ಕಾರಿ ನೌಕರರ ಸಂಘದ 2014ನೇ ಸಾಲಿನ ಸದಸ್ಯತ್ವ ಶುಲ್ಕ 100 ಗಳನ್ನು ಕೇಂದ್ರ ಸಂಘಕ್ಕೆ ನೇರವಾಗಿ ಪಾವತಿಸದೆ ಜಿಲ್ಲೆ, ತಾಲೂಕು, ಯೋಜನಾ ಶಾಖೆಗಳ ಉಳಿತಾಯ ಖಾತೆಗೆ ಸಂದಾಯವಾಗುವಂತೆ ಅಥವಾ ಸಂಘದ ಕಚೇರಿಯಲ್ಲಿ ರಶೀತಿ ಮೂಲಕ ಸದಸ್ಯತ್ವ ಶುಲ್ಕ ಪಾವತಿಸುವುದು ನಗರ ಹಾಗೂ ತಾಲೂಕಿನ ಎಲ್ಲ ಸರ್ಕಾರಿ ನೌಕರರು ಈ ಕೆಳಕಂಡ ಬ್ಯಾಂಕ್ ಖಾತೆಗೆ ಜಮಾ ಮಾಡಲು ಸಂಘದ ಅಧ್ಯಕ್ಷ ಎಚ್.ಕೆ. ರಾಮು ಕೋರಿದ್ದಾರೆ. ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮುಖ್ಯ ಕಚೇರಿ, ಮೈಸೂರು, ಉಳಿತಾಯ ಖಾತೆ ಸಂಖ್ಯೆ- 54037489292, ಎಂಐಸಿಆರ್ ಸಂಖ್ಯೆ- 570006001, ಐಎಫ್‌ಎಸ್‌ಸಿ ಕೋಡ್- ಖಇಂಘ0040054.
ಕ್ಯಾನ್ಸರ್ ತಪಾಸಣೆ
ಮೈಸೂರು: ವಾಣಿವಿಲಾಸ ರಸ್ತೆಯಲ್ಲಿರುವ ಪ್ರೀತಿ ಕ್ಯಾನ್ಸರ್ ಸೆಂಟರ್‌ನಲ್ಲಿ ಜ. 30 ರಂದು ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರ ಏರ್ಪಡಿಸಿದ್ದು, ಒಂದು ತಿಂಗಳಿಗೂ ಮೇಲ್ಪಟ್ಟು ವಾಸಿಯಾಗದ ಗಾಯ, ರಕ್ತಸ್ರಾವ, ಊತ, ಗಡಸುತನ, ನುಂಗುವಾಗಿನ ತೊಂದರೆ, ಗಂಟಲಲ್ಲಿ ಉರಿತ ಅಥವಾ ತಡೆತ, ಧ್ವನಿ ಬದಲಾವಣೆ ಇರುವ ರೋಗಿಗಳು ಈ ಶಿಬಿರದಲ್ಲಿ ಭಾಗವಹಿಸಬಹುದು. ದೂ. 4259259 ಸಂಪರ್ಕಿಸಬಹುದು.
ಕೋಟೆಹುಂಡಿ ಯುವಕ ನಾಪತ್ತೆ
ಮೈಸೂರು: ತಾಲೂಕಿನ ಜಯಪುರ ಹೋಬಳಿ ಕೋಟೆಹುಂಡಿ ನಿವಾಸಿ ಕುರಿ ದಾಸೇಗೌಡ ಎಂಬವರ ಪುತ್ರ ಪುಟ್ಟಣ್ಣ (25) ಕರ್ಚಿಗೆ ಹಣಕೊಟ್ಟಿಲ್ಲವೆಂದು ಜ.19 ರಂದು ಮುನಿಸಿಕೊಂಡು ಹೋದವರು ನಾಪತ್ತೆಯಾಗಿದ್ದಾರೆ. ಚಹರೆ- 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2595781 ಸಂಪರ್ಕಿಸಲು ಜಯಪುರ ಠಾಣೆ ಎಎಸ್‌ಐ ಬಿ.ಸಿ. ಸಿದ್ದನಾಯಕ ಕೋರಿದ್ದಾರೆ.
ಕೆಲಸ ಕೊಡಿಸುವ ನೆಪದಲ್ಲಿ ವಂಚನೆ
ಮೈಸೂರು: ಖಾಸಗಿ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಯುವತಿಯಿಂದ ಹಣ ಪಡೆದು ವ್ಯಕ್ತಿಯೊಬ್ಬ ವಂಚಿಸಿರುವ ಬಗ್ಗೆ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆ.ಆರ್. ನಗರದ ಸುಭಾಷ್‌ನಗರ ನಿವಾಸಿ ವಿಶ್ವನಾಥ್ ಎಂಬವರ ಪುತ್ರಿ ಶಶಿಕಲಾ ವಂಚನೆಗೊಳಗಾದವರು. ಇವರು ಎಂ.ಕೆ. ಎಂಟರ್‌ಪ್ರೈಸಸ್‌ನ ಮಾಲೀಕ ಮಹೇಶ್ ಎಂಬವರಿಗೆ 75 ಸಾವಿರ ನೀಡಿದ್ದರು. ಆದರೆ, ಮಹೇಶ್ ಸರಿಯಾದ ಕಂಪನಿಯಲ್ಲಿ ಕೆಲಸ ಕೊಡಿಸದೇ ವಂಚಿಸಿರುವುದಾಗಿ ಶಶಿಕಲಾ ತಂದೆ ವಿಶ್ವನಾಥ್ ದೂರು ನೀಡಿದ್ದಾರೆ. ಈ ಸಂಬಂಧ ಕೆ.ಆರ್. ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಂಡಿದ್ದಾರೆ.
ಬಹಿಷ್ಕಾರ ಆರೋಪ ನಿರಾಕರಿಸಿ ಪ್ರತಿಭಟನೆ
ಮೈಸೂರು: ತಾಲೂಕಿನ ಮಾವಿನಹಳ್ಳಿ ನಿವಾಸಿ ವೆಂಕಟರಾಮು ದಲಿತ ಕುಟುಂಬಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದಾಗಿ ಆರೋಪಿಸಿ ಗ್ರಾಮದ ಡಾ.ಭೀಮ್‌ರಾವ್ ಯುವಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟಿಸಿದರು. ಮಾವಿನಹಳ್ಳಿ ಎಲ್ಲೆಗೆ ಸೇರಿದ ಸರ್ವೆ ನಂ.140ರಲ್ಲಿ 9.10 ಎಕರೆ ಜಮೀನು ಚಕ್ರ ಕೊಡಿಗೆ ಜಮೀನಾಗಿದ್ದು, ಸುಮಾರು ವರ್ಷಗಳ ಹಿಂದೆ ತಹಸೀಲ್ದಾರ್ ಅವರ ಆದೇಶದ ಮೇರೆಗೆ 20 ಜನರಿಗೆ ಈ ಜಮೀನು ವಿಭಾಗವಾಗಿದ್ದು, ಈ ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ದುರುದ್ದೇಶದಿಂದ ವೆಂಕಟರಾಮು ಇಲ್ಲಸಲ್ಲದ ಆರೋಪ ಮಾಡಿ 20 ಮಂದಿಯ ಮೇಲೂ ದೂರು ನೀಡಿದ್ದಾರೆ. ಬಳಿಕ ತಮ್ಮನ್ನು ಸ್ವಜಾತಿಯರೆ ಬಹಿಷ್ಕಾರ ಹಾಕಿರುವುದಾಗಿ ಆರೋಪಿಸಿ ಪ್ರತಿಭಟಿಸಿರುವುದಾಗಿ ಸಂಘದ ಪದಾಧಿಕಾರಿಗಳು ಆರೋಪಿಸಿದರು. ಸಂಘದ ಕಾಳಸ್ವಾಮಿ, ಸಿ. ರವಿ, ಮಹೇಶ್, ಸಿದ್ದರಾಜು, ಚಲುವ, ಎಸ್. ಸಿದ್ದರಾಜು ಇದ್ದರು.
ಟೆಂಪೋ ಡಿಕ್ಕಿ: ಬೈಕ್ ಸವಾರ ಸಾವು
ಮೈಸೂರು: ಟೆಂಪೋ ಟ್ರಾವೆಲ್ಸ್ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟು, ಮತ್ತೊಬ್ಬರು ಗಾಯಗೊಂಡಿರುವ ಘಟನೆ ರಮಾಬಾಯಿನಗರದ ಬಳಿ ಸೋಮವಾರ ರಾತ್ರಿ ನಡೆದಿದೆ. ಮೈಸೂರು ತಾಲೂಕು ಬಂಡಿಪಾಳ್ಯ ನಿವಾಸಿ ರಮೇಶ್ (45) ಮೃತಪಟ್ಟವರು. ಇವರ ಪತ್ನಿ ಗೀತಾ ಎಂಬವರು ತೀವ್ರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಮೇಶ್ ಮತ್ತು ಗೀತಾ ಬೈಕಿನಲ್ಲಿ ಶ್ರೀರಾಂಪುರ ವರ್ತುಲ ರಸ್ತೆ ಕಡೆಯಿಂದ ನಂಜನಗೂಡು ರಸ್ತೆಗೆ ಹೋಗುತ್ತಿದ್ದಾಗ ಎದುರಿನಿಂದ ಬಂದ ಟೆಂಪೋ ಟ್ರಾವೆಲ್ಸ್ ಡಿಕ್ಕಿಯಾಗಿದೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ರಮೇಶ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಅವರ ಪತ್ನಿ ಗೀತಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಾರಿಗೆ ಬಸ್ ಡಿಕ್ಕಿ: ಯುವಕ ಸಾವು
ಮೈಸೂರು: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಅಪರಿಚಿತ ಯುವಕನೊಬ್ಬ ಮೃತಪಟ್ಟಿರುವ ಘಟನೆ ಮೈಸೂರು- ಬೆಂಗಳೂರು ರಸ್ತೆಯಲ್ಲಿರುವ ಸಿದ್ದಲಿಂಗಪುರದಲ್ಲಿ ಸೋಮವಾರ ನಡೆದಿದೆ. ರಸ್ತೆ ದಾಟುತ್ತಿದ್ದ ಯುವಕನಿಗೆ ಕೆಎಸ್‌ಆರ್‌ಟಿಸಿ ಬಸ್ ಚಾಲಕ ರವಿ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಗಾಯಗೊಂಡ ಯುವಕನನ್ನು ಕೆ.ಆರ್. ಆಸ್ಪತ್ರೆಗೆ ಸಾಗಿಸಿದರೂ, ಬದುಕುಳಿಯಲಿಲ್ಲ. ಯುವಕನ ಚಹರೆ- 20 ವರ್ಷ, 5.8 ಅಡಿ ಎತ್ತರ, ದುಂಡು ಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಬಲ ಎದೆಯಲ್ಲಿ ಕಪ್ಪು ಕಾರಳಿದೆ. ಕಪ್ಪು ಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ.0821- 2418328, 528 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement