ಹುಣಸೂರಿನಲ್ಲಿ ರಸ್ತೆ ಸುರಕ್ಷತಾ ಸಪ್ತಾಹ
ಹುಣಸೂರು: ಪಟ್ಟಣದಲ್ಲಿ ಸಾರಿಗೆ ಇಲಾಖೆ ವತಿಯಿಂದ 25ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮಕ್ಕಳಿಂದ ಜಾಥಾ, ವಿವಿಧ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಪಟ್ಟಣದ ಎಆರ್‌ಟಿಒ ಕಚೇರಿಯಿಂದ ಹೊರಟ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಘೋಷಣೆಯುಳ್ಳ ನಾಮಫಲಕ ಹಿಡಿದು, ಘೋಷಣೆ ಕೂಗಿ ಗಮನ ಸೆಳೆದರು.
ಎಆರ್‌ಟಿಒ ಕಚೇರಿಯಿಂದ ನೀಡಿದ ಶ್ವೇತ ವರ್ಣದ ಟೀ ಶರ್ಟ್, ಟೋಪಿ ಧರಿಸಿದ್ದ ವಿದ್ಯಾರ್ಥಿಗಳು, ಸ್ವಯಂ ಸೇವಕರು, ರೋಟರಿ ವೃತ್ತ, ಬಸ್ ನಿಲ್ದಾಣ, ವಿಶ್ವೇಶ್ವರಯ್ಯ ವೃತ್ತ, ಎಚ್.ಡಿ. ಕೋಟೆ ವೃತ್ತ, ಕಲ್ಕುಣಿಕೆ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಿದರು. ಜಾಥಾದಲ್ಲಿ ಎಆರ್‌ಟಿಒ ಚಿಕ್ಕಸ್ವಾಮಿ, ಸಾರಿಗೆ ಅಧಿಕಾರಿಗಳಾದ ಜೆ.ಪಿ. ಗಂಗಾಧರ್, ಎನ್. ಪ್ರಭಾಕರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.