ಅರಣ್ಯ ಇಲಾಖೆ ದಿನಗೂಲಿ ನೌಕರರ ಪ್ರತಿಭಟನೆ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಜ. 29
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅರಣ್ಯ ಇಲಾಖೆಯ ದಿನಗೂಲಿ ನೌಕರರು ಪಟ್ಟಣದ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ಆರಂಭಿಸಿದರು.
ಸರ್ಕಾರದ ನಿರ್ದೇಶನದಂತೆ ದಿನಗೂಲಿ ನೌಕರರ ಸಂಬಳವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಸೇವೆಯಲ್ಲಿ 10 ವರ್ಷ ಪೂರೈಸಿರುವ ದಿನಗೂಲಿ ನೌಕರರನ್ನು ಕಾಯಂ ಮಾಡಬೇಕು. ದಿನಗೂಲಿ ನೌಕರರಿಗೆ ನೀಡುವ ಸಂಬಳದಲ್ಲಿ ಮಾಡಲಾಗುತ್ತಿರುವ ತಾರತಮ್ಯ ನೀತಿ ನಿಲ್ಲಿಸಿ, ಪ್ರತಿಯೊಬ್ಬರಿಗೂ ಸರ್ಕಾರ ನಿಗದಿಪಡಿಸಿರುವ 226.50 ದಿನಗೂಲಿಯನ್ನು ಸಮರ್ಪಕವಾಗಿ ಪ್ರತಿ ತಿಂಗಳು ನೌಕರರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು.
ಹುಣಸೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ದಿನಗೂಲಿ ಮಹಿಳಾ ಸಿಬ್ಬಂದಿಯನ್ನು ಪಿರಿಯಾಪಟ್ಟಣದ ಬೆಟ್ಟದಪುರ ಹಾಗೂ ಕೊಪ್ಪ ವ್ಯಾಪ್ತಿಗೆ ವರ್ಗಾವಣೆ ಮಾಡಲಾಗಿದ್ದು, ಅವರನ್ನು ಹುಣಸೂರಿಗೆ ಕರೆಸಿಕೊಂಡು ಅಲ್ಲೆ ಕೆಲಸ ನೀಡುವಂತೆ ಒತ್ತಾಯಿಸಿದರು.
ಈ ಬಗ್ಗೆ ಪತ್ರಿಕೆಗೆ ಸ್ಪಷ್ಟನೆ ನೀಡಿದ ವಲಯ ಅರಣ್ಯಾಧಿಕಾರಿ ಎಂ.ಎಸ್. ಚಿಣ್ಣಪ್ಪ, ಸರ್ಕಾರದಿಂದ ಬರುವ ಅನುದಾನದ ಮೇಲೆ ದಿನಗೂಲಿ ನೌಕರರಿಗೆ ವೇತನ ನೀಡಲಾಗುತ್ತಿದೆ. ಕೆಲವು ಯೋಜನೆಗಳಲ್ಲಿ ಅನುದಾನ ಬರುವುದು ನಿಧಾನವಾದಾಗ ಮಾತ್ರ ವೇತನ ನೀಡುವುದು ನಿಧಾನವಾಗಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ರಾಜ್ಯ ಸಂಚಾಲಕ ರಾಜಶೇಖರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಸಂಘದ ತಾಲೂಕು ಅಧ್ಯಕ್ಷ ರುದ್ರಯ್ಯ, ತಾ. ಸಂಚಾಲಕ ಜಗ್ಗಯ್ಯ, ಗಣೇಶ್, ಸೋಮಯ್ಯ, ಶಂಕರ, ಗಾಯಿತ್ರಿ, ಮಂಜುಳಾ, ಸಾವಿತ್ರಿ, ಜಯಮ್ಮ ಇದ್ದರು.