ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೃಷಿ ಇಲಾಖೆ ಹಳೆ ನಿಯಮ ಜಾರಿಗೆ ಒತ್ತಾಯ

Rashmi Kasaragodu
Updated On : 30 Jan 2014, 1:33 am

ಕ.ಪ್ರ. ವಾರ್ತೆ, ಹುಣಸೂರು, ಜ.29
ಸರ್ಕಾರ ಹೊಸದಾಗಿ ಜಾರಿಗೆ ತಂದ ನಿಯಮಾವಳಿಯಿಂದ ರೈತರು ಕೃಷಿ ಇಲಾಖೆಯ ಪರಿಕರಗಳು ಮತ್ತು ಸಹಾಯಧನ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹಳೆಯ ನಿಯಮ ಅಸ್ತಿತ್ವಕ್ಕೆ ತರುವಂತೆ ಸರ್ಕಾರ ಮತ್ತು ಜಿಪಂಗೆ ಮನವಿ ಸಲ್ಲಿಸಲು ತಾಪಂ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.
ತಾಪಂ ಸಭಾಂಗಣದಲ್ಲಿ ಬುಧವಾರ ಸಾಮಾನ್ಯ ಸಭೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್, ಇಲಾಖೆಯ ಮಾಹಿತಿ ನೀಡುತ್ತಿದ್ದಾಗ ತಾಪಂ ಸದಸ್ಯ ಗಣಪತಿ ಮಾತನಾಡಿ, ಕೃಷಿ ಇಲಾಖೆಯ ಸವಲತ್ತನ್ನು ಪಡೆಯಲು ರೈತರು ಹರಸಾಹಸ ಪಡುವಂತಾಗಿದೆ. ಆದ್ದರಿಂದ ಹಿಂದಿನ ನಿಯಮ ಜಾರಿಗೆ ತರುವಂತೆ ಒತ್ತಾಯಿಸಿದರು.
ಸರ್ಕಾರದ ಅನುದಾನವನ್ನು ಕ್ಷೇತ್ರಗಳಿಗೆ ಸಮರ್ಪಕವಾಗಿ ಹಂಚಿಕೆ ಮಾಡುವಲ್ಲಿ ತಾಪಂ ಇಒ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಮಾಜಿ ಅಧ್ಯಕ್ಷ ಕೆಂಪನಹಳ್ಳಿ ಕುಮಾರ್ ಮತ್ತು ಸದಸ್ಯರು ಆರೋಪಿಸಿ ಸಭೆ ಬಹಿಷ್ಕರಿಸುವುದಾಗಿ ಪಟ್ಟುಹಿಡಿದರು. ಬಳಿಕ ಕಾಲಾವಕಾಶ ನೀಡಿ ಸ್ಪಷ್ಟ ಮಾಹಿತಿ ನೀಡುವುದಾಗಿ ಇಒ ಡಾ. ಪ್ರೇಮಕುಮಾರ್ ಭರವಸೆ ನಿಡಿದ ಬಳಿಕ ಸಭೆ ಮುಂದುವರಿಯಿತು.
ಸದಸ್ಯರ ಅಸಮಾಧಾನ: ತಾಲೂಕು ಮಟ್ಟದ ಅಧಿಕಾರಿಗಳ ಗೈರುಹಾಜರಿಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಹನಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 108 ಆಂಬುಲೆನ್ಸ್ ವಾಹನ ಇದ್ದರೂ ಇಲ್ಲದಂತಾಗಿದೆ. ಗೂಡ್ಸ್ ಆಟೋ ಮತ್ತಿತರ ಖಾಸಗಿ ವಾಹನಗಳಲ್ಲಿ ಮೀತಿ ಮೀರಿದಷ್ಟು ಪ್ರಯಾಣಿಕರನ್ನು ಸಾಗಿಸಲಾಗುತ್ತಿದೆ. ಇದರಿಂದ ಸಾಕಷ್ಟು ಅಪಘಾತ ಸಂಭವಿಸುತ್ತಿದೆ. ಈ ಬಗ್ಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಕೂಡಲೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಸದಸ್ಯ ರಮೇಶ್ ಆಗ್ರಹಿಸಿದರು.
ತಾಪಂ ಅಧ್ಯಕ್ಷೆ ದೇವಕಿ ತಿಮ್ಮನಾಯ್ಕ, ಉಪಾಧ್ಯಕ್ಷೆ ಜಯರತ್ನ ಮಹೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಪುರಿ ಪ್ರಭು, ಇಒ ಡಾ. ಪ್ರೇಮಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement