ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಧರ್ಮಗಳ ನಡುವಿನ ಭಿನ್ನತೆ ಬಹುದೊಡ್ಡ ಸಮಸ್ಯೆ

Rashmi Kasaragodu
Updated On : 30 Jan 2014, 1:34 am

ಸುತ್ತೂರು: ಪ್ರಪಂಚದಲ್ಲಿ ಧರ್ಮಗಳ ನಡುವೆ ಇರುವ ಭಿನ್ನತೆಯೇ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ ಎಂದು ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ ಹೇಳಿದರು. ನಂಜನಗೂಡು ತಾಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ  ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಗದ್ದುಗೆ ವೇದಿಕೆಯಲ್ಲಿ ಬುಧವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ನಿರುದ್ಯೋಗವಾಗಲಿ, ಬಡತನವಾಗಲಿ ಅಥವಾ ಪರಿಸರ ನಾಶವಾಗಲಿ ಇಂದು ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿಲ್ಲ. ಆ ಸಮಸ್ಯೆಗಳನ್ನು ಬಗೆಹರಿಸಲು ಸಾಕಷ್ಟು ಮಾರ್ಗೋಪಾಯಗಳಿವೆ. ಆದರೆ ಇದಕ್ಕಿಂತ ಯಾವುದೇ ಎರಡು ಧರ್ಮಗಳ ನಡುವೆ ಇರುವ ಭಿನ್ನತೆಯೂ ಅತಿದೊಡ್ಡ ಸಮಸ್ಯೆ ಎಂಬ ವಿಚಾರ ಆತಂಕದ ಸಂಗತಿ ಎಂದರು.
ಕ್ರೈಸ್ತ, ಹಿಂದು ಹಾಗೂ ಮುಸ್ಲಿಂ ಧರ್ಮಗಳ ನಡುವೆ ಇರುವ ವೈಷಮ್ಯ ಕಡಿಮೆ ಮಾಡಲು ಪ್ರತಿಯೊಬ್ಬರು ಅನ್ಯ ಧರ್ಮವನ್ನು ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಭಾರತ್ ಸ್ವಾಭಿಮಾನ ಕರ್ನಾಟಕದ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ, ಚಾಮರಾಜನಗರ ಸಂತಪೌಲರ ದೇವಾಲಯದ ಫಾ. ಕ್ರಿಸ್ಟಿ ಸ್ಯಾಮ್ ಹಾಗೂ ಕುಂದಗೋಳ ಉಪಖಜಾನಾಧಿಕಾರಿ ಬಿ.ಎಂ. ಮುಜಾವರ ಉಪನ್ಯಾಸ ನೀಡಿದರು. ಸಮ್ಮುಖ ವಹಿಸಿದ್ದ ಬೇಲಿಮಠದ ಶಿವರುದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.


ಫೆ.2 ರಂದು ಸುತ್ತೂರಿಗೆ ಸಿಎಂ
ಮೈಸೂರು: ಸುತ್ತೂರು ಕ್ಷೇತ್ರದಲ್ಲಿ ಆಯೋಜಿಸಿರುವ ಜಾತ್ರಾ ಮಹೋತ್ಸವಕ್ಕೆ ಫೆ.2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವರು. ಸಿದ್ದರಾಮಯ್ಯ ಅವರು ಫೆ.1 ರಂದು ಆಗಮಿಸಿ ಘನಲಿಂಗ ಶಿವಯೋಗಿ ಅತಿಥಿಗೃಹವನ್ನು ಉದ್ಘಾಟಿಸಬೇಕಿತ್ತು. ಆದರೆ ಅಂದು ಅವರು ತುರ್ತು ಕಾರ್ಯನಿಮಿತ್ತ ಗುಲ್ಬರ್ಗಕ್ಕೆ ತೆರಳಬೇಕಾಗಿರುವುದರಿಂದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಿಲ್ಲ. ಬದಲಾಗಿ ಫೆ.2 ರಂದು ಬೆಳಗ್ಗೆ 9.30ಕ್ಕೆ ಅತಿಥಿ ಗೃಹದ ಉದ್ಘಾಟನೆ ಹಾಗೂ ವಸ್ತುಪ್ರದರ್ಶನ ಮತ್ತು ಕೃಷಿ ಮೇಳದ ಸಮಾರೋಪ ನೆರವೇರಿಸುವರು ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಎಚ್.ಗಂಗಾಧರನ್ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅಧ್ಯಕ್ಷತೆ ವಹಿಸುವರು. ಲೋಕೋಪಯೋಗಿ ಸಚಿವ ಡಾ. ಎಚ್.ಸಿ ಮಹದೇವಪ್ಪ, ಸಹಕಾರಿ ಸಚಿವ ಎಚ್.ಎಸ್ ಮಹದೇವ ಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದಿದ್ದಾರೆ. ಜ.28 ರಂದು ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆಯನ್ನು ಅನಿವಾರ್ಯ ಕಾರಣಗಳಿಂದ ಮೂಂದೂಡಲಾಗಿದ್ದು, ಫೆ.1 ರಂದು ಸಂಜೆ 6 ಕ್ಕೆ ಏರ್ಪಡಿಸಿದೆ ಎಂದು ಅವರು ತಿಳಿಸಿದ್ದಾರೆ.
ಬೈಕ್ ರ್ಯಾಲಿ: ಒಬ್ಬರಿಗೆ ಗಾಯ
ಮೈಸೂರು: ಜೆಡಿಎಸ್ ಆಯೋಜಿಸಿದ್ದ ಬೈಕ್ ರ್ಯಾಲಿಯ ವೇಳೆ ಅಪಘಾತ ಸಂಭವಿಸಿ ಜೆಡಿಎಸ್ ಮುಖಂಡರೊಬ್ಬರು ಗಾಯಗೊಂಡಿದ್ದಾರೆ. ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಮುಖಂಡ ಅಜೀಜ್ ಉಲ್ಲಾ ಗಾಯಗೊಂಡವರು.  
ಬಾಲಕ ನಾಪತ್ತೆ
ಮೈಸೂರು: ಮಂಡಿ ಮೊಹಲ್ಲಾ ನಿವಾಸಿ ಮೊಹಮ್ಮದ್ ನವಾಜ್ ಎಂಬವರ ಪುತ್ರ ಅಮೀನ್ ನವಾಜ್ (16) ಮಂಗಳವಾರ ಸೈಕಲ್ ತೆಗೆದುಕೊಂಡು ಹೋದವರು ನಾಪತ್ತೆಯಾಗಿದ್ದಾರೆ. ಚಹರೆ- 4.5 ಅಡಿ ಎತ್ತರ, ಸಾಧಾರಣ ಶರೀರ, ಗೋದಿ ಮೈಬಣ್ಣ, ಕೋಲು ಮುಖ, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ಮಾಹಿತಿ ಸಿಕ್ಕಲ್ಲಿ ದೂ.0821- 2418312 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement