ನಾಳೆ ಕಲಾಸಂಗಮ ಕಾರ್ಯಕ್ರಮ
ಹುಣಸೂರು: ಖ್ಯಾತ ಚಲನಚಿತ್ರ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರ ಸ್ಮರಣಾರ್ಥ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನ ಹಾಗೂ ಕಲಾ ಸಂಗಮ ಕಾರ್ಯಕ್ರಮವನ್ನು ಸತ್ಯ ಎಂಎಎಸ್ ಫೌಂಡೇಶನ್ ವತಿಯಿಂದ ಪಟ್ಟಣದ ಮುನೇಶ್ವರ ಮೈದಾನದಲ್ಲಿ ಜ.31ರ ಸಂಜೆ 4.30ಕ್ಕೆ ಏರ್ಪಡಿಸಲಾಗಿದೆ.
ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಹಾಗೂ ಡಾ. ರಾಜ್ಕುಮಾರ್, ಶಂಕರ್ನಾಗ್, ವಿಷ್ಣುವರ್ಧನ್ ಅವರ ನೆನಪಿನೋತ್ಸವ ಕಾರ್ಯಕ್ರಮದ ಅಂಗವಾಗಿ ಜೂನಿಯರ್ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ, ಕಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಚಿಲ್ಕುಂದದ ಇಂಧೂ ನಾಗರಾಜು, ಲಕ್ಷ್ಮೀನಾಗರಾಜು, ದ್ವಾರಕೀಶ್, ಬಾಲು, ಯೋಗೇಶ್, ಖ್ಯಾತ ಕೊಳಲು ವಾದಕ ಶೇಷಗಿರಿ, ಹಿರಿಕ್ಯಾತನಹಳ್ಳಿ ಕೃಷ್ಣ, ಕಲ್ಕುಣಿಕೆ ಬಸವರಾಜು ಸೇರಿಂದತೆ 200ಕ್ಕೂ ಹೆಚ್ಚು ಕಲಾವಿದರನ್ನು ಸನ್ಮಾನಿಸಲಾಗುವುದು.
ಪಟ್ಟಣದಲ್ಲಿ ಹುಣಸೂರು ಕೃಷ್ಣಮೂರ್ತಿ ಅವರ ಹೆಸರಿನಲ್ಲಿ ಕಲಾಮಂದಿರ ನಿರ್ಮಿಸಬೇಕು ಮತ್ತು ರಸ್ತೆಗಳಿಗೆ ಕಲಾವಿದರ ಹೆಸರನ್ನು ನಾಮಕರಣ ಮಾಡುವಂತೆ ಫೌಂಡೇಷನ್ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಜೀತ ಪದ್ಧತಿಯಿಂದ ಸಾವಿಗೀಡಾಗಿಲ್ಲ: ಸ್ಪಷ್ಟನೆ
ಟಿ. ನರಸೀಪುರ: ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ಶಿವಕುಮಾರ ಅವರು ಜೀತ ಪದ್ಧತಿಯಿಂದ ಸಾವಿಗೀಡಾಗಿಲ್ಲ ಎಂದು ರೈತ ಸಂಘದ ಅಧ್ಯಕ್ಷ ಆಲಗೂಡು ಮಹದೇವ ಸ್ಪಷ್ಟಪಡಿಸಿದ್ದಾರೆ.
ಗ್ರಾಮದ ಸುಬ್ಬಣ್ಣ ಎಂಬುವವರ ಬಳಿ ಯಾವುದೇ ಜಮೀನಾಗಲಿ ಅಥವಾ ಹತ್ತಾರು ಸಂಖ್ಯೆಗಳಲ್ಲಿ ದನಗಳನ್ನು ಕಟ್ಟುವ ಕೊಟ್ಟಿಗೆಯಾಗಲಿ ಇಲ್ಲದಿರುವಾಗ ದಲಿತ ಸಮುದಾಯದ ಶಿವಕುಮಾರ ಎಂಬಾತನನ್ನು ಜೀತಕ್ಕಿರಿಸಿಕೊಳ್ಳಲು ಸಾಧ್ಯವೇ ಇಲ್ಲ. ಸಾಲ ನೀಡಿದ್ದ 10 ಸಾವಿರ ಹಣವನ್ನು ವಸೂಲು ಮಾಡಲು ಕಾನೂನಿನ ಮೊರೆ ಹೋಗಿದ್ದರಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ತಮಗೂ ದುಃಖವಾಗಿದೆ ಎಂದಿದ್ದಾರೆ. ಶಿವಕುಮಾರ ಆತ್ಮಹತ್ಯೆ ಮಾಡಿಕೊಂಡಿದ್ದು ಜೀತಪದ್ಧತಿಯಿಂದ ಎಂದು ಸಂಘಟನೆಯೊಂದರ ಕಾರ್ಯಕರ್ತರು ಹಾಗೂ ಮುಖಂಡರು ಹೇಳಿಕೊಂಡಿದ್ದಾರೆ. ಅಲ್ಲದೆ, ತಾಲೂಕಿನಲ್ಲಿ ಎಲ್ಲಿಯೂ ಜೀತದ ಕೆಲಸ ಇಲ್ಲದಿದ್ದರೂ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ. ಮೃತನ ಕುಟುಂಬಕ್ಕೆ ಲಕ್ಷಾಂತರ ರುಪಾಯಿಗಳ ಪರಿಹಾರ ಹಣ ನೀಡಿದ್ದರೂ ಕೆಲವರು ಪ್ರತಿಷ್ಠೆಗಾಗಿ ಹೋರಾಟ ತೀವ್ರಗೊಳಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಬಗ್ಗೆ ಸೂಕ್ತ ತನಿಖೆಯಾಗಲಿ ಎಂದು ಮಹದೇವ ಅವರೊಂದಿಗೆ ರೈತ ಮುಖಂಡರಾದ ಕೆ.ಜಿ. ಶಿವಪ್ರಸಾದ್, ಕಳ್ಳೀಪುರ ಮಹದೇವಸ್ವಾಮಿ, ಲೋಕೇಶ್, ದಿನೇಶ್, ಪ್ರಭುಸ್ವಾಮಿ, ಶಿವನಂಜಪ್ಪ, ಗುರು ಕೋರಿದ್ದಾರೆ.