ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆದಿವಾಸಿ ಹಕ್ಕು ಅನುಷ್ಠಾನಕ್ಕೆ ಆಗ್ರಹ

Rashmi Kasaragodu
Updated On : 31 Jan 2014, 1:17 am

ಕ.ಪ್ರ.ವಾರ್ತೆ    ಮೈಸೂರು    ಜ. 30
ಆದಿವಾಸಿ ಬುಡಕಟ್ಟು ಹಕ್ಕುಗಳ ಅನುಷ್ಠಾನ ಹಾಗೂ ರಕ್ಷಣೆಗಾಗಿ ಒತ್ತಾಯಿಸಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತು ಮೈಸೂರು ಜಿಲ್ಲಾ ಘಟಕ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು.
ಆದಿವಾಸಿ ಅರಣ್ಯ ಹಕ್ಕು ಕಾಯ್ದೆಯಡಿ ವಯಕ್ತಿಕ ಮತ್ತು ಸಮುದಾಯಿಕ ಹಕ್ಕುಗಳನ್ನು ಜಾರಿಗೊಳಿಸಬೇಕು. ಎಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿ ಠಾಣೆಯಲ್ಲಿ ದೂರು ನೀಡಿ 3 ತಿಂಗಳಾದರೂ ಪ್ರಕರಣ ದಾಖಲಿಸಿಕೊಳ್ಳದೇ ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಆದಿವಾಸಿಗಳ ಮೇಲೆ ಅರಣ್ಯಾಧಿಕಾರಿಗಳು ಮತ್ತು ಡೋಂಗಿ ಪರಿಸರವಾದಿಗಳಿಗೆ ಅರಣ್ಯ ನಿರ್ವಹಣೆ ಮಾಡುವ ಕೌಶಲ ಇಲ್ಲ. ಹೀಗಾಗಿ ಆದಿವಾಸಿಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅರಣ್ಯದಲ್ಲಿ ಅಂತರ್ಜಲ ಸಾಕಷ್ಟು ಕುಸಿದು, ಜಲಮೂಲಗಳು ಬತ್ತಿ ಹೋಗಿದೆ. ಹಳ್ಳ-ಕೊಳ್ಳ, ಕೆರೆ-ಕುಂಟೆಗಳು ಹೂಳು ತುಂಬಿವೆ. ಪ್ರಾಣಿಗಳಿಗೆ ಸಾಕಷ್ಟು ಆಹಾರ ಮತ್ತು ನೀರಿನ ಕೊರತೆ ಉಂಟಾಗಿದೆ. ಪ್ರಾಣಿಗಳ ಮೇಲಿನ ಅನಗತ್ಯ ಅಧ್ಯಯನಗಳಿಂದ ಘಾಸಿಗೊಂಡ ಪ್ರಾಣಿಗಳು ದಿಕ್ಕುತಪ್ಪಿ ನಾಡಿನತ್ತ ಧಾವಿಸುತ್ತಿವೆ. ಲಿಫ್ಟ್ ಸಂಸ್ಥೆ ಈ ವಿಷಯವನ್ನು ಸರ್ಕಾರದಿಂದ ಮುಚ್ಚಿಟ್ಟಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಡೋಂಗಿ ಪರಿಸರವಾದಿಗಳ ಕುಮ್ಮಕ್ಕು: ಸಮುದಾಯಿಕ ಹಕ್ಕು ಪತ್ರವನ್ನು ಮೈಸೂರು ಜಿಲ್ಲೆಯ 19 ಹಾಡಿಗಳಲ್ಲಿ ವಿತರಿಸಿ, ಆದಿವಾಸಿಗಳಿಗೆ ಅರಣ್ಯ ಉತ್ಪನ್ನಗಳನ್ನು ಸಂಗ್ರಹ ಮಾಡದಂತೆ ಕೆಲವು ಡೋಂಗಿ ಪರಿಸರವಾದಿಗಳ ಕುಮ್ಮಕ್ಕಿನಿಂದ ಆದಿವಾಸಿಗಳ ವಿರುದ್ಧ ಆದೇಶ ನೀಡಿರುವ ಹುಣಸೂರು ವನ್ಯಜೀವಿ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರನ್ನು ಆದಿವಾಸಿ ದೌರ್ಜನ್ಯ ಕಾಯ್ದೆಯಡಿ ಅಮಾನತುಗೊಳಿಸಿ ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.
ಶೈಕ್ಷಣಿಕವಾಗಿ ಆದಿವಾಸಿಗಳ ಉನ್ನತೀಕರಿಸಲು ಗಿರಿಜನ ಆಶ್ರಮ ಶಾಲೆಗಳನ್ನು ಮೇಲ್ದರ್ಜೆಗೇರಿಸಬೇಕು. ಈ ಶಾಲೆಗಳಲ್ಲಿ ಕನಿಷ್ಠ ಶೇ.50 ಶಿಕ್ಷಕರನ್ನು ಕಾಯಂ ಆಗಿ ಗಿರಿಜನ ಹಿನ್ನೆಲೆಯವರನ್ನು ನೇಮಿಸಬೇಕು. ರಾಜ್ಯ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಹೆಸರು ಬದಲಿಸದೇ ಮೂಲ ಬುಡಕಟ್ಟು ಕೇಂದ್ರಿತ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ರಾಜ್ಯದಲ್ಲಿ ಪ್ರತ್ಯೇಕವಾದ ಆದಿವಾಸಿ ಬುಡಕಟ್ಟು ಪಂಗಡಗಳ ಆಯೋಗ ರಚಿಸಬೇಕು. ಆದಿವಾಸಿ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಡೋಂಗ್ರಿ ಗರಾಸಿಯಾ, ಹಕ್ಕಿಪಿಕ್ಕಿ, ಚೆಂಚು, ಇರುಳಿಗ, ಅಸಲರು, ಗೌಡಲು, ಪಾರ್ಥಿ, ರಾಜಗೊಂಡ ಎಂಬ ಬುಡಕಟ್ಟುಗಳಿಗೆ ಪೌಷ್ಟಿಕ ಆಹಾರ ಯೋಜನೆಗಳನ್ನು ವಿಸ್ತರಿಸಬೇಕು. ಕರ್ನಾಟಕ ಬುಡಕಟ್ಟುಗಳ ಪರ್ಯಾಯ ಪದಗಳನ್ನು ಮತ್ತು ಪ್ರಾದೇಶಿಕ ಮಿತಿಯನ್ನು ವೈಜ್ಞಾನಿಕ  ಅಧ್ಯಯನಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಮೈಸೂರು ಜಿಲ್ಲೆಯಲ್ಲಿ ವಾಸವಾಗಿರುವ ಮೂಲ ಆದಿವಾಸಿ ಗಿರಿಜನ ರೈತರ ಜಮೀನುಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆ ಬಾವಿ ಕೊರೆಸಬೇಕು. ಹಾಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧಿಸಬೇಕು ಹಾಗೂ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆದಿವಾಸಿ ರಕ್ಷಣಾ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ. ಕಾವೇರ, ಜಿಲ್ಲಾಧ್ಯಕ್ಷ ವಿಜಯಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement