ಕೋರಂ ಕೊರತೆ; ಜೆಡಿಎಸ್ ಸಭಾತ್ಯಾಗ
ಕ.ಪ್ರ.ವಾರ್ತೆ ಮೈಸೂರು ಜ. 30
ಮೈಸೂರು ತಾಪಂ ಸಭೆಯು ಕೋರಂ ಅಭಾವದಿಂದ ವಿಳಂಬವಾಗಿ ಆರಂಭವಾಯಿತು. ಆಡಳಿತರೂಢ ಕಾಂಗ್ರೆಸ್ ಬೇಕಾಬಿಟ್ಟಿ ಸಭೆ ನಡೆಸುತ್ತಿದೆ ಎಂಬ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ಗುರುವಾರ ಜರುಗಿತು.
ಬೆಳಗ್ಗೆ 11ಕ್ಕೆ ಆರಂಭವಾಗಬೇಕಿದ್ದ ಸಭೆಯು 11.40ಕ್ಕೆ ಶುರುವಾಯಿತು. ಆಡಳಿತ ಪಕ್ಷದ ಸದಸ್ಯರು ಸಭೆಗೆ ಹಾಜರಾಗದಿದ್ದನ್ನು ಖಂಡಿಸಿ ಜೆಡಿಎಸ್ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ಅರ್ಧತಾಸು ತಡವಾಗಿ ಆಗಮಿಸಿದ ಅಧ್ಯಕ್ಷೆ ನಿರ್ಮಲ ಹೊನ್ನಯ್ಯ, ಉಪಾಧ್ಯಕ್ಷ ಸಿದ್ದಯ್ಯಗೆ ಕೋರಂ ಕೊರತೆ ಎದುರಾಯಿತು. ಮೊದಲಿಗೆ ಬಂದು ಕುಳಿತಿದ್ದು ತಾಪಂ ಇಒ ಕೋರಂ ಇಲ್ಲದೆ ಸುಮ್ಮನೆ ಕುಳಿತಿದ್ದರು. ಅಷ್ಟೊತ್ತಿಗಾಗಲೇ ಸಭಾಂಗಣದ ಹೊರಗೆ ಜೆಡಿಎಸ್ ಸದಸ್ಯರು ಗಲಾಟೆ ಆರಂಭಿಸಿದರು. ಕೋರಂ ಕೊರತೆ ಇರುವುದರಿಂದ ಸಭೆಯನ್ನು ರದ್ದುಗೊಳಿಸಿ. ಆಡಳಿತ ಪಕ್ಷದ ಸದಸ್ಯರು ತಮಗೆ ಇಷ್ಟ ಬಂದ ಹಾಗೆ ಸಭೆ ನಡೆಸುತ್ತಿದ್ದಾರೆ. ಪ್ರತಿಪಕ್ಷದವರಿಗೆ ಗೌರವ ನೀಡುತ್ತಿಲ್ಲ. ಈ ಸಭೆ ನಾವು ಭಾಗವಹಿಸುವುದಿಲ್ಲ ಎಂದು ಇಲವಾಲ ಕ್ಷೇತ್ರದ ಸದಸ್ಯ ಗೋವಿಂದಸ್ವಾಮಿ ಹೊರಹೋದರು. ಜೆಡಿಎಸ್ ಸದಸ್ಯರು ಹಿಂಬಾಲಿಸಿದರು.
ಅಧಿಕಾರಿಯೇ ಗುರಿ: ಬೆಳಗ್ಗೆ 11.40ಕ್ಕೆ ಆರಂಭವಾದ ಸಭೆಯಲ್ಲಿ ಮೊದಲಿಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ವರದಿ ಒಪ್ಪಿಸಿ ಕುಳಿತರು. ನಂತರ ಪಶುಪಾಲನಾ ಇಲಾಖೆ ಸರದಿ. ಆದರೆ ಕೊನೆಯಲ್ಲಿ ಬರಬೇಕಿದ್ದ ಪಂಚಾಯತ್ರಾಜ್ ಎಂಜಿನಿಯರಿಂಗ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸೋಮಶೇಖರ್ ಬಂದರು. ಇವರು ಈ ಮೊದಲು ತಾಪಂನ ಪ್ರಭಾರ ಇಒ ಆಗಿ ಕಾರ್ಯನಿರ್ವಹಿಸಿದವರು.
ಇವರನ್ನೇ ಗುರಿಯಾಗಿಸಿಕೊಂಡಿದ್ದ ಸದಸ್ಯರು ನೀವು ಸರಿಯಾದ ಮಾಹಿತಿ ಸಲ್ಲಿಸಿಲ್ಲ. ಆದ್ದರಿಂದ ಹೊಸದಾಗಿ ತಂದಿರುವ ಮಾಹಿತಿಯನ್ನೇ ಓದುವಂತೆ ಸೂಚಿಸಿ ಸುಮಾರು ಒಂದೂವರೆ ತಾಸು ಓದಿಸಿದರು. ಆದರೆ, ಅವರ ಮಾಹಿತಿಯನ್ನು ಯಾರೂ ಕೇಳಿಸಿಕೊಳ್ಳಲಿಲ್ಲ.