ಗಾಂಧೀಜಿ ಕುಟುಂಬ ನಿರ್ಲಕ್ಷ್ಯ ಸಲ್ಲ
ಕ.ಪ್ರ. ವಾರ್ತೆ, ಮೈಸೂರು, ಜ. 30
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿ ಅವರ ಕುಟುಂಬ ಜನತೆಗೆ ಗೌಣವಾದುದು ದುರಂತ ಎಂದು ಗಾಂಧಿವಾದಿ ಹಾಗೂ ಚಿಂತಕ ಪ್ರೊ. ಎನ್. ಬೋರಲಿಂಗಯ್ಯ ವಿಷಾದಿಸಿದರು.
ಮೈಸೂರು ವಿವಿಯ ಗಾಂಧಿ ಭವನ ಹಾಗೂ ಮಹಾಜನ ಪ್ರಥಮದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಮಾನಸಗಂಗೋತ್ರಿಯ ಭವನದಲ್ಲಿ ಗುರುವಾರ ಏರ್ಪಡಿಸಿದ್ದ 66 ನೇ ಸರ್ವೋದಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಗಾಂಧಿ ಕುಟುಂಬ ಯಾವುದು ಎನ್ನುವುದು ಎಷೋ ಜನಕ್ಕೆ ತಿಳಿಯದು. ಅವರ ಪತ್ನಿ ಕಸ್ತೂರ ಬಾ ಜತೆಯಲ್ಲಿ ಇದ್ದ ಕಾರಣ ಅವರ ಬಗ್ಗೆ ಸ್ವಲ್ಪ ಜನಕ್ಕೆ ತಿಳಿದಿರಬಹುದು.
ಆದರೆ ಅವರ ಮಕ್ಕಳು ಯಾರು ಹಾಗೂ ಅವರ ಹೆಸರೇನು ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ. ಹಿರಲಾಲ್ ಗಾಂಧಿ, ಮಯಲಾಲ್ ಗಾಂಧಿ, ದೇವದಾಸ್ ಗಾಂಧಿ ಹಾಗೂ ರಾಮದಾಸ್ ಗಾಂಧಿ ಅವರ ಪುತ್ರರು. ಮತ್ತೊಂದು ಮಗು ಚಿಕ್ಕವಯಸ್ಸಿನಲ್ಲಿಯೇ ತೀರಿಕೊಂಡಿತು.
ನೆಹರು ಕುಟುಂಬದವರು ಎಲ್ಲರಿಗೂ ಗೊತ್ತು, ಆದರೆ ಗಾಂಧಿ ಕುಟುಂಬ ಯಾರಿಗೂ ತಿಳಿಯದು ಎಂದರು.
ಮಹಾನ್ ಬರಹಗಾರ: ಗಾಂಧೀಜಿ ಬರೀ ಹೋರಾಟಗಾರರು ಮಾತ್ರವಲ್ಲ. ಅವರೊಬ್ಬ ಮಹಾನ್ ಬರಹಗಾರ. ಅವರು ತಮ್ಮ ಕೈಯಾರೆ ಬರೆದಿರುವುದು ಸುಮಾರು 50 ಸಾವಿರ ಪುಟಗಳಿವೆ. ಅವರು ಹೇಳಿದ್ದನ್ನು ಬೇರೆಯವರು ಬರೆದಿರುವುದು ಸುಮಾರು 25 - 30 ಸಾವಿರ ಪುಟಗಳಿವೆ. ಅಲ್ಲದೆ ಇಂದಿಗೂ ಜಗತ್ತಿನ ನಾನಾ ಭಾಗಗಳಲ್ಲಿ ಗಾಂಧಿ ಕುರಿತಾಗಿ ಪುಸ್ತಕಗಳು ಪ್ರಕಟವಾಗುತ್ತಿವೆ ಎಂದರು.
ಈ ಭೂಮಿಯಲ್ಲಿ ಗಾಂಧಿಯಂಥ ಮನುಷ್ಯ ಮತ್ತೊಬ್ಬನಿಲ್ಲ ಎಂದು ಐನ್ಸ್ಟೇನ್ ಹೇಳಿರುವುದು ಗಮನಾರ್ಹ. ಆದರೆ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿಯವರಿಗೆ ಅವರ ಕುರಿತಾದ ಪಠ್ಯ ಕಾಣದಿರುವುದು ಆಶ್ಚರ್ಯ ಸಂಗತಿ.
ನಮ್ಮ ಮಕ್ಕಳಿಗೆ ಅವರ ಬಗ್ಗೆ ಹೇಳದೆ ಹೋದರೆ ಸಮಾಜ ದುರಂತದತ್ತ ಸಾಗಿದೆ. ಆದ್ದರಿಂದ ಅವರ ಬದುಕು ಮತ್ತು ವಿಚಾರಧಾರೆಗಳನ್ನು ಸಮಗ್ರವಾಗಿ ತಿಳಿಸುವ ಕೆಲಸ ಹೆಚ್ಚಾಗಿ ನಡೆಯಬೇಕು ಎಂದು ಅವರು ಆಶಿಸಿದರು. ಮಹಾಜನ ವಿದ್ಯಾಸಂಸ್ಥೆ ಅಧ್ಯಕ್ಷ ಆರ್. ವಾಸುದೇವ ಮೂರ್ತಿ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕುಲಸಚಿವ ಪ್ರೊ.ಸಿ. ಬಸವರಾಜು ಪ್ರತಿಜ್ಞಾವಿಧಿ ಬೋಧಿಸಿದರು.
ಸ್ವಾತಂತ್ರ ್ಯ ಹೋರಾಟಗಾರ ಜಾಫರ್ ಮೊಹಿದ್ದಿನ್, ಮೈಸೂರು ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಡಿ.ಎಸ್. ಗಾಂವ್ಕರ್, ಮಹಾಜನ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ವಿ. ಪ್ರಭಾಕರ ಇದ್ದರು. ಗಾಂಧಿ ನಿರ್ದೇಶಕ ಪ್ರೊ. ಎಂ.ಜಿ. ಬಸವರಾಜ ಸ್ವಾಗತಿಸಿದರು.
ನೆಹರು ಕುಟುಂಬದ ಇಂದಿರಾಗಾಂಧಿಯಿಂದ ರಾಹುಲ್ಗಾಂಧಿ ತನಕ ಎಲ್ಲರಿಗೂ ಗೊತ್ತು. ಅಲ್ಲದೆ ದೇವೇಗೌಡರ ಕುಟುಂಬವಾಗಲಿ, ಯಡಿಯೂರಪ್ಪ ಕುಟುಂಬವಾಗಲಿ ಯಾರಿಗೆ ಗೊತ್ತಿಲ್ಲ ಹೇಳಿ. ಹೀಗಿರುವಾಗ ತಮ್ಮ ಕುಟುಂಬವನ್ನು ಗೌಣವಾಗಿರಿಸಿಕೊಂಡು ದೇಶದ ಹಿತಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹುತಾತ್ಮ ಗಾಂಧೀಜಿ ಕುಟುಂಬದ ಬಗ್ಗೆ ನಾವು ತಿಳಿಯದಿರುವುದು ದುರಂತ.
ಟಿ ಪ್ರೊ. ಎನ್. ಬೋರಲಿಂಗಯ್ಯ, ಗಾಂಧಿವಾದಿ