ಟಿ. ನರಸೀಪುರದಲ್ಲೂ ಮೆರವಣಿಗೆ
ಟಿ. ನರಸೀಪುರ: ಬಗರ್ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸುವಂತೆ ಆಗ್ರಹಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಸರ್ಕಾರಿ ಅತಿಥಿಗೃಹದ ಮುಂಭಾಗ ಜಮಾವಣೆಗೊಂಡ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು, ಭೂರಹಿತರಿಗೆ ರಾಜ್ಯ ಸರ್ಕಾರ ಭೂಮಿ ನೀಡಲು ಬಗರ್ಣಹುಕುಂ ಸಾಗುವಳಿ ಸಕ್ರಮಗೊಳಿಸಬೇಕು ಎಂದು ಒತ್ತಾಯಿಸಿದರು.
ಕಾಲೇಜು ಜೋಡಿ ರಸ್ತೆಯ ಮಾರ್ಗವಾಗಿ ತಾಲೂಕು ಕಚೇರಿಗೆ ತೆರಳಿ ಉಪ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಭೂ ನ್ಯಾಯ ಮಂಡಳಿ ರಚನೆ ಮಾಡಿ, ಬಗರ್ಹುಕುಂ ಸಾಗುವಳಿ ಸಕ್ರಮಗೊಳಿಸಬೇಕು ಹಾಗೂ ಸಾಗುವಳಿ ಸಕ್ರಮ ವಂಚಿತರಿಗೆ ಅರ್ಜಿ ಸಲ್ಲಿಸಲು ಮರು ಅವಕಾಶವನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ಮರಿಮಹದೇವಯ್ಯ, ಕಾರ್ಯದರ್ಶಿ ಮೂರ್ತಿ, ಕ್ಷೇತ್ರ ಉಪಾಧ್ಯಕ್ಷ ಮಹದೇವಸ್ವಾಮಿ, ರಮೇಶ್, ಪ್ರಧಾನ ಕಾರ್ಯದರ್ಶಿ ಪುಟ್ಟಮರುಡಯ್ಯ, ಕಾರ್ಯದರ್ಶಿ ಚಿನ್ನಸ್ವಾಮಿ, ವಕೀಲ ರಾಜಣ್ಣ, ವಿಚಾರವಾದಿ, ಪತ್ರಕರ್ತ ಕೆ.ಎನ್. ಪ್ರಭುಸ್ವಾಮಿ, ಮುಖಂಡರಾದ ಎನ್. ಲಿಂಗಪ್ಪಾಜಿ, ಕುಮಾರ, ಶಿವಕುಮಾರ, ನಾಗರಾಜು, ರವಿ ಭಾಗವಹಿಸಿದ್ದರು.