ದಲಿತ ಮುಖಂಡ ಹತ್ಯೆ: ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಜ. 30
ಮಾದಿಗ ಮೀಸಲಾತಿ ಹೋರಾಟಗಾರ ಹಾಗೂ ದಲಿತ ಮುಖಂಡ ದೇವೇಂದ್ರಪ್ಪ ದಳಪತಿ ಅವರ ಹತ್ಯೆ ಖಂಡಿಸಿ ಮಾದಿಗ ಮೀಸಲಾತಿ ಆಂದೋಲನ ವಿದ್ಯಾರ್ಥಿ ವೇದಿಕೆ ಪದಾಧಿಕಾರಿಗಳು ಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು.
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು ಕನ್ಯಾಕೋಳ ಗ್ರಾಮದಲ್ಲಿ ದೇವೇಂದ್ರಪ್ಪ ದಳಪತಿ ಅವರನ್ನು ಕಾಣದ ಕೈಗಳು ಸಂಚು ರೂಪಿಸಿ, ಹಬ್ಬದಲ್ಲಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ಅವರನ್ನು ಗುರಿಯಾಗಿಸಿಕೊಂಡು ಹಿಂದುಳಿದ ವರ್ಗದವರು ಹತ್ಯೆ ಮಾಡಿದ್ದಾರೆ. ಈ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ದೇವೇಂದ್ರಪ್ಪ ಅವರ ಕುಟುಂಬಕ್ಕೆ ಈಗ ನೀಡಿರುವ ಪರಿಹಾರದ ಜೊತೆಗೆ ಇನ್ನೂ 15 ಲಕ್ಷ ರು. ಪರಿಹಾರ ಒದಗಿಸಬೇಕು. ಗಾಯಗೊಂಡವರಿಗೆ ತಲಾ 5 ಲಕ್ಷ ರು. ಪರಿಹಾರ ನೀಡಬೇಕು. ಬಡ ದೇವೇಂದ್ರಪ್ಪರ ಕುಟುಂಬಕ್ಕೆ 5 ಎಕರೆ, ಗಾಯಗೊಂಡವರಿಗೆ ತಲಾ 2 ಎಕರೆ ಜಮೀನು ನೀಡಬೇಕು. ಇವರ ಕುಟುಂಬದ ಯಾರಿಗಾದರೂ ಒಬ್ಬರಿಗೆ ರಾಜ್ಯ, ಕೇಂದ್ರ ಸರ್ಕಾರದ ನೌಕರಿ ನೀಡಬೇಕು ಎಂದು ಅವರು ಒತ್ತಾಯಿಸಿದರು. ರಾಜ್ಯದಲ್ಲಿ ಮಾದಿಗರ ಮೇಲೆ ನಡೆಯುವ ದಬ್ಬಾಳಿಕೆ ಮತ್ತು ದೌರ್ಜನ್ಯ ತಡೆಯಬೇಕು. ಸರ್ಕಾರ ಕೂಡಲೇ ಒಳಮೀಸಲಾತಿ ಜಾರಿಗೊಳಿಸಿ ಅಸಮಾನತೆ ಹೋಗಲಾಡಿಸಬೇಕು ಎಂದು ಅವರು ಆಗ್ರಹಿಸಿದರು.
ವೇದಿಕೆ ಅಧ್ಯಕ್ಷ ಮರಡೀಪುರ ಬಿ. ರವಿಕುಮಾರ್, ಉಪಾಧ್ಯಕ್ಷ ವೆಂಕಟರಾಜು, ಪ್ರಧಾನ ಕಾರ್ಯದರ್ಶಿ ಬಸವರಾಜು, ಕಾನೂನು ಸಲಹೆಗಾರ ಲಕ್ಷ್ಮಣ್ ಮತ್ತಿತರರು ಇದ್ದರು