ಸುತ್ತೂರು ಜಾತ್ರೆ: ಗಮನ ಸೆಳೆದ ಶೈಕ್ಷಣಿಕ, ವಿಜ್ಞಾನ ಪ್ರದರ್ಶನ
ಕ.ಪ್ರ. ವಾರ್ತೆ, ಸುತ್ತೂರು, ಜ. 30
ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಶೈಕ್ಷಣಿಕ ಹಾಗೂ ವಿಜ್ಞಾನ ವಸ್ತು ಪ್ರದರ್ಶನವು ಮೂರನೇ ದಿನಕ್ಕೆ ಕಾಲಿಟ್ಟಿದೆ.
ಈ ಪ್ರದರ್ಶನದಲ್ಲಿ ಒಟ್ಟು 9 ವಿಭಾಗಗಳಿದ್ದು, ಅದರಲ್ಲಿ ಸಾಮಾನ್ಯ ವಿಜ್ಞಾನ ಮತ್ತು ಮನರಂಜನೆಯ ಮೂಲಕ ವಿಜ್ಞಾನಕ್ಕೆ ಸಂಬಂಧಿಸಿದಂತೆ 25 ಮಾದರಿಗಳಿವೆ. ಮನುಗನಹಳ್ಳಿ ಜೆಎಸ್ಎಸ್ ಪ್ರೌಢಶಾಲಾ ಮಕ್ಕಳು ಮ್ಯಾಗ್ನೆಟಿಕ್ ಕ್ರೇನ್ ಬಗ್ಗೆ ಗ್ರಾಮೀಣ ಜನತೆಗೆ ಅತ್ಯಂತ ಆಕರ್ಷಕವಾಗಿ ವಿವರಣೆ ನೀಡುತ್ತಿದ್ದದ್ದು ಮನ ಸೆಳೆಯುವಂತ್ತಿತ್ತು.
ರಾಮಾಪುರ ಜೆಎಸ್ಎಸ್ ಪ್ರೌಢಶಾಲೆಯ ಮಕ್ಕಳು ಜಾಗತಿಕ ತಾಪಮಾನ ಏರಿಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಮನದಟ್ಟು ಮಾಡಿಸುತ್ತಿದ್ದರು. ದೇವಲಾಪುರ ಜೆಎಸ್ಎಸ್ ಪ್ರೌಢಶಾಲಾ ಮಕ್ಕಳು ಮಳೆ ನೀರು ಕೊಯ್ಲು ಎಂಬ ಮಾದರಿಯ ಮೂಲಕ ಆಕರ್ಷಕವಾಗಿ ಜನರಿಗೆ ವಿವರಣೆ ನೀಡುತ್ತಿದ್ದರು. ತಾಳವಾಡಿ ಜೆಎಸ್ಎಸ್ ಪ್ರೌಢಶಾಲಾ ಮಕ್ಕಳು ರೇಷ್ಮೆ ಕೃಷಿಯ ಬಗ್ಗೆ ರೈತರಿಗೆ ಅನುಕೂಲವಾಗುವಂತಹ ಮಾಹಿತಿ ನೀಡಿ, ಪ್ರಾತ್ಯಕ್ಷಿಕೆ ತೋರಿಸಿದರು. ಮೇಟಗಳ್ಳಿ ಜೆಎಸ್ಎಸ್ ಪ್ರೌಢಶಾಲೆಯ ಮಕ್ಕಳು ಔಷಧಿಯ ಸಸ್ಯಗಳನ್ನು ಬಳಸಿ, ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧಾನದ ಬಗ್ಗೆ ಜನರಿಗೆ ಮಾಹಿತಿ ನೀಡಿದರು. ಢಚಾಮರಾಜನಗರ ಜೆಎಸ್ಎಸ್ ಬಾಲಕರ ಪ್ರೌಢಶಾಲೆಯ ಮಕ್ಕಳು ಸೌರ ಕುಲುಮೆ ಎಂಬ ಮಾದರಿಯ ಮೂಲಕ ಸೌರಶಕ್ತಿಯನ್ನು ಬಳಸಿ ಅಡಿಗೆ ತಯಾರಿಸುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ಜನರಿಗೆ ತೋರಿಸಿದರು. ಸರಸ್ವತಿಪುರಂ ಜೆಎಸ್ಎಸ್ ಪ್ರೌಢಶಾಲೆಯ ಮಕ್ಕಳು ಪಾಯಿಂಟ್ ಕ್ಯಾಲಿಮರ್ ಎಂಬ ಮಾದರಿಯ ಮೂಲಕ ಪಕ್ಷಿಗಳ ವಲಸೆ, ಔಷಧಿಯ ಸಸ್ಯಗಳು ಮತ್ತು ಸಮುದ್ರದಲ್ಲಿ ಕಂಡುಬರುವ ವೈವಿಧ್ಯಮಯ ಜಲಚರಗಳನ್ನು ಪರಿಚಯಿಸುವ ಮೂಲಕ ಜೀವ ವೈವಿಧ್ಯತೆ ಬಗ್ಗೆ ಜನರಿಗೆ ತಿಳಿಸುತ್ತಿದ್ದುದು ಅತ್ಯಂತ ಆಕರ್ಷಕವಾಗಿತ್ತು. ಮೂಢನಂಬಿಕೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅಜ್ಜೀಪುರ ಮತ್ತು ನಾರ್ವೆ ಶಾಲೆಯ ಮಕ್ಕಳು ತೆಂಗಿನ ಕಾಯಿ ಹೊಡೆದರೆ ಹೂವು ಬರುವಂತಹ, ಮಂತ್ರದಿಂದ ಬೆಂಕಿ ಬರುವಂತಹ, ಬಿಳಿಯ ಬಟ್ಟೆಯ ಮೇಲೆ ಕೆಂಪು ಹಸ್ತ ಮೂಡುವಂತೆ ತೋರಿಸಿ ಅದರ ವೈಜ್ಞಾನಿಕ ಹಿನ್ನೆಲೆ ಜನರಿಗೆ ತಿಳಿಸಿದರು.
ಬೆಳಗಿನಿಂದಲೇ ಹರಗುರು ಚರಮೂರ್ತಿಗಳು ಶೈಕ್ಷಣಿಕ ಮತ್ತು ವಿಜ್ಞಾನ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ಮಾದರಿಗಳನ್ನು ವೀಕ್ಷಿಸಿದರು.
ಗಣ್ಯವ್ಯಕ್ತಿಗಳು ಸೇರಿದಂತೆ ಸಾವಿರಾರು ಪ್ರೇಕ್ಷಕರು ವಸ್ತುಪ್ರದರ್ಶನ ವೀಕ್ಷಿಸಿ, ವಸ್ತು ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.