ಅಕ್ರಮ ಗಾಂಜಾ ಬೆಳೆ; ಏಳು ಬಂಧನ
ಹುಣಸೂರು: ಲಕ್ಷ್ಮಣತೀರ್ಥ ನದಿಯ ಪಕ್ಕದ ಅಡಕೆ ತೋಟವೊಂದರಲ್ಲಿ ಅಕ್ರಮವಾಗಿ 2,800 ಕೆ.ಜಿ ತೂಕವುಳ್ಳ, ಎರಡು ಕೋಟಿಗೂ ಹೆಚ್ಚು ಬೆಲೆ ಬಾಳುವ ಗಂಜಾ ಗಿಡ ಬೆಳೆದಿದ್ದು, 7 ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕೇರಳ ಮೂಲದ ಈಡ್ಕಿ ಜಿಲ್ಲೆಯ ವ್ಯಾಪ್ತಿಯಲ್ಲಿ ವಾಸಿಸುವ ಅಭಿ, ಪಚ್ಚನ್, ಬಿನ್, ಸಾಜಿ, ಅಬಿನ್, ಜೆಮ್ಸ್, ಲೈಜ್ ಬಂಧಿತ ಆರೋಪಿಗಳು.
ಜಮೀನಿನ ಮಾಲೀಕರಾದ ಸುಶೀಲಮ್ಮ ಎಂಬವರ ಮೇಲೆ ಪ್ರಕರಣ ದಾಖಲಿಸಲು ತನಿಖೆ ನಡೆಯುತ್ತಿದ್ದು, ಇವರು ಮೈಸೂರಿನ ಪೊಲೀಸ್ ಅಧಿಕಾರಿಯೊಬ್ಬರ ಅತ್ತೆ ಎಂದು ತಿಳಿದು ಬಂದಿದೆ. ತಾಲೂಕಿನ ಉಮ್ಮತ್ತೂರು ಗ್ರಾಪಂ ವ್ಯಾಪ್ತಿಗೆ ಬರುವ ನಲ್ಲೂರುಪಾಲದ ಹನಗೋಡು ನಾಲಾದ ಆಡಕೆ ಮತ್ತು ತೆಂಗಿನ ತೋಟದ ಮಧ್ಯದೊಳಗೆ ಗಾಂಜಾ ಬೆಳೆ ಬೆಳೆದಿದ್ದು, ಇದರ ಅಂದಾಜು ವೆಚ್ಚ ರು. 2 ಕೋಟಿ ಎನ್ನಲಾಗಿದೆ. ಈ ಜಮೀನನ್ನು ಕೇರಳದ ಮೂಲದವರಿಗೆ ಗುತ್ತಿಗೆ ನೀಡಲಾಗಿತ್ತು. ಕಳೆದ ನಾಲ್ಕು ತಿಂಗಳಿನಿಂದ ಗಂಜಾ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ನಂಜುಂಡ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಗಜೇಂದ್ರಪ್ರಸಾದ್ ನೇತೃತ್ವದಲ್ಲಿ ದಾಳಿ ನಡೆಸಿ ತೋಟದಲ್ಲಿದ್ದ ಗಾಂಜಾ ಗಿಡಗಳನ್ನು ತೆಗೆಸಿ ಮಾಲು ಸಮೇತ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.